ಮನೆಮನೆ ಬಚ್ಚಲ ರೊಚ್ಚದು ನಿಂತಿರೆ
ಚರಂಡಿಯೊಳಗಿನ ಹೊಂಡದಲಿ
ಡಬ್ಬದ ತಗಡುಗಳಂದದ ಗಾಡಿಯು
ನಿಂತಿರಲದರಾ ಪಕ್ಕದಲಿ
ಮಸಾಲೆಪೂರಿಯ ಸಾರವಿದೆ
ರೊಚ್ಚಿನ ತೀಕ್ಷ್ಣತೆಯಳಿಯುತಿದೆ
ದೇವರಗುಡಿಗೋಪುರದಡಿಯಲಿ
ಸಂಜೆಯ ಘಂಟಾನಾದವಿರೆ
ಅರ್ಚನೆಗೈದಿಹ ಭಕ್ತರ ಕಂಗಳು
ಅತ್ತಿತ್ತಲುಗುತಲೋಡುತಿರೆ
ಗಲ್ಲಿಯೊಳÀಲೆಯುತಲಲ್ಲಲ್ಲೇನಿವೆ
ಎಲ್ಲವನರಿಯುವ ಆಸೆಯಿರೆ
ಪೂರಿಗಳಾರನು ತಟ್ಟೆಯೊಳಿಟ್ಟು
ಮುರಿಯುವ ಸದ್ದದು ಕೇಳುತಿರೆ
ಕಿವಿಗಳು ಮೊರದಂತಾಗುವುವು
ಮೂಗಿನ ಹೊಳ್ಳೆಗಳರಳುವುವು
ಪಂಚೇಂದ್ರಿಯಗಳು ನಾಲಗೆಯಂಚಲಿ
ಒಗ್ಗಟ್ಟಿನ ಸಭೆ ಸೇರುವುವು
ಮಸಾಲೆಪೂರಿಯ ತಿನ್ನುವ ಕ್ಷಣದಾ-
ನಂದದ ಕ್ಷಣಗಳನೆಣಿಸುತಲಿ
ಬಾಳಲಿ ಬಂದಿಹ ಬವಣೆಗಳೆಲ್ಲವ-
ನೊಮ್ಮೆಲೆ ಹೊರಗೊಗೆಯುತಲಿ
ಕಾಲ್ಗಳು ಸರಸರವೋಡುವುವು
ಗಾಡಿಯ ಸನಿಹವ ತಲುಪುವುವು
ಬಿಸಿಯ ಮಸಾಲೆಯ ದ್ರಾವಣದಲ್ಲಾ
ಪೂರಿಗಳೊಳಮೈ ತುಂಬುತಿರೆ
ಚಾಚಿದ ಕರಗಳ ಸರದಿಯನೆಣಿಸುತ
‘ತಗೊಳ್ಳಿ’ ಎಂಬಾಹ್ವಾನವಿರೆ
ಸ್ವರ್ಗದ ಬಾಗಿಲು ತೆರೆದಂತೆ
ಪಾಪದ ಲೆಕ್ಕಗಳಳಿದಂತೆ
ಬಚ್ಚಲ ರೊಚ್ಚಿನ ವಾಸನೆಯೊಂದಿಗೆ
ಪಾನಿಯ ಘಮಘಮವೂಡಿರಲು
ಸುಖದುಃಖಗಳಲಿ ಸಮತೆಯ ಸಾರುವ
ಕೆಚ್ಚೆದೆಯಂಗಡಿಯಲ್ಲಿರಲು
ಮಕ್ಕಳು, ಮುದುಕರು, ಯುವಕರ ಗುಂಪಲಿ
ನಾರೀಮಣಿಗಳು ಕೂಡಿರಲು
ಬನ್ನಿರಿ, ತಿನ್ನಿರಿ ಮಸಾಲೆಪೂರಿಯ
ಎನ್ನುವುದೊಂದೇ ಕೂಗಿರಲು
ದೈವವು ಮಾಯಾಜಾಲವ ಹೆಣೆದಿದೆ
ಪೂರೀವಾಲನ ನೇಮಿಸಿದೆ
ಲೀಲಾಜಾಲದೊಳೆಲ್ಲರ ಮನಗಳ
ಸೆಳೆಯುತ ಕುಣಿಸುತಲಾಡಿಸಿದೆ
ಎಲ್ಲರನೊಂದೆಡೆಗೂಡಿಸಿದೆ.
ಡಿ.ನಂಜುಂಡ
20/07/2014
ಯಪ್ಪಾ ಇನ್ನು lifeನಲ್ಲಿ ಪಾನೀ ಪುರಿ ಗಾಡಿ ತಂಟೆಗೆ ನಾನು ಹೋದರೆ ಕೇಳಿ!
ಪ್ರತ್ಯುತ್ತರಅಳಿಸಿಲಘುಹಾಸ್ಯಕ್ಕಾಗಿ ಈ ಬರಹ. ಧನ್ಯವಾದಗಳು
ಪ್ರತ್ಯುತ್ತರಅಳಿಸಿ