ಶುಕ್ರವಾರ, ಜುಲೈ 11, 2014

ಬಾ ಸದ್ಗುರುವೆ! ನಮ್ಮೊಳಗೆ


ಬಾ ಸದ್ಗುರುವೆ! ನಮ್ಮೊಳಗೆ
ವಿಶ್ವವಿಚಿತ್ರವ ತಿಳಿಸೆಮಗೆ

ಹೊಟ್ಟೆಯ ಹಸಿವಿಗೆ ಬಿಸಿಬಿಸಿ ಹಾಲಿದೆ
ಕೊಟ್ಟಿಗೆಯೊಳಗಿನ ಹಸುವಿನದು
ದಣಿವನು ನೀಗಲು ತಣ್ಣನೆ ನೀರಿದೆ
ಗಿರಿವನತಳದಾ ಹೊನಲಿನದು

ಅನ್ನದ ತುತ್ತಲಿ ಸತ್ತ್ವಗಳಡಗಿವೆ
ಬೆಳೆಗಳಿಗೇರಿದ ಮಣ್ಣಿನದು
ನರನಾಡಿಗಳಲಿ ರಕುತವು ಹರಿದಿದೆ
ತಾಯಿಯ ಮಮತೆಯ ಕರುಳಿನದು

ನೋಡುವ ಕಣ್ಣಲಿ ಬೆಳಕಿನ ಹೊಳಪಿದೆ
ಬಾನಲಿ ಬೆಳಗುವ ಸೂರ್ಯನದು
ಆಡುವ ಆಟದಿ ನಲಿವಾವರಿಸಿದೆ
ಮೋಸವನರಿಯದ ಮಗುವಿನದು

ನಮ್ಮಯ ಮೈಮನಕಣಕಣವೆಲ್ಲವೂ
ಸಮಷ್ಟಿಯೊಳ ಸಂಸೃಷ್ಟಿಯದು
ಸುಖಸಂತೋಷವು ದುಃಖವಿಕೋಪವು
ಭಾವವಿಕಾರಗಳಾಗಿಹುದು

ಹೃದಯದ ಗವಿಯಲಿ ಕತ್ತಲೆಯಳಿಯಲಿ
ಸಂಚರಿಸಲಿ ನಿನ್ನಯ ಪಾದವದು
ಅರಿವಿನ ಹಣತೆಯು ಬಾಳನು ಬೆಳಗಲಿ
ಕಳಚಲಿ ಪೊರೆಯೊಳಗಣ್ಣಿನದು.

ಡಿ.ನಂಜುಂಡ
11/07/2014

2 ಕಾಮೆಂಟ್‌ಗಳು:

  1. ಗುರುವು ನಮ್ಮ ತಿದ್ದಿ ತೀಡಿ ಮೂರ್ತ ರೂಪಕೆ ತರುವ ನಿಜ ದೈವ. ತಮ್ಮ ಈ ಕವನವು ಗುರು ಪೌರ್ಣಮಿಗೆ ನನಗೆ ಪ್ರಾರ್ಥನೆಯ ಗೀತೆಯಾಯಿತು.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಬದರೀನಾಥ್ ಗುರುಪೂರ್ಣಿಮೆಯ ಶುಭಾಶಯಗಳು

    ಪ್ರತ್ಯುತ್ತರಅಳಿಸಿ