ಭಾನುವಾರ, ಜುಲೈ 13, 2014

ಆಸೆ

ಬೈಗುಗೆಂಪಿನ ಚೆಲುವಿನಾಗಸದ ಕೆಳಗಿಳಿದು
ಸಾಗರದಿ ಮುಳುಗುತಿಹ ರವಿಯಾಗುವಾಸೆ 
ರಾಗರಂಜಿತಭಾವಸಂಸ್ಕಾರಪದಗಳಲಿ
ಬಾಗುತಿಹ ಬಣ್ಣಗಳ ಪ್ರತಿಫಲಿಸುವಾಸೆ

ಮೂಡಣದ ಹೊಂಗಿರಣವೋಡೋಡಿ ಬರುವಾಗ
ಸಡಗರದಿ ನಭವೇರಿ ಹಾರಾಡುವಾಸೆ
ನಾಡ ಕನ್ನಡವಾಗಿ ಜನಮನದ ದನಿಯಾಗಿ
ಹಾಡಿಗನ ಪಡೆನುಡಿಯ ನಡೆಯಾಗುವಾಸೆ

ಮರಮರದಿ ಚಿಮ್ಮುತಿಹ ಚಿಗುರುಗಳಲಲ್ಲಲ್ಲಿ
ಉರದ ಕೆಂಪಿನ ಒಲವನಿರಿಸುವಾ ಆಸೆ
ಗಿರಿತಲದ ಹೊನಲುಗಳ ಹರಿವಾಗಿ ಹಾಲ್ಗರೆದು
ನೊರೆಯ ನಗುವಿನಲೊಮ್ಮೆ ಕರಗುವಾ ಆಸೆ  

ಬಾನೇರಿ ಮೇಘÀತನುವಾಗಿಳೆಯೆಡೆಗೆ ಬಾಗಿ
ವನದೇವಿಗಭಿಷೇಕಜಲವಾಗುವಾಸೆ
ಅಣುರೇಣುತೃಣಕಾಷ್ಠಬಂಧಗಳಲೊಂದಾಗಿ

ಕಣಕಣದಲಾನಂದಘನÀವಾಗುವಾಸೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ