ಕನ್ನಡನುಡಿಯೆನ್ನೆದೆಯೊಳ
ಮಣ್ಣಲಿ ಹಸಿರಿನ ಕುಡಿಯೊಡೆದು
ಚೆನ್ನುಡಿಗಳ ಹನಿಹಾಲ್ದೆನೆಗೂಡಲಿ
ಹೊನ್ನಿನ ಹೊಳಪಿನ ಮೈದಳೆದು
ಮುದನೀಡುವ ಪದಬಂಧಗಳೆನ್ನಯ
ಹೃದಯಪ್ರಾಣದ ಕಣವಾಗಿ
ಮೃದುಗತಿಯಲಿ ಶಿವಸದನದ್ವಾರದ
ಕದ ತೆರೆಯಲಿ ಕಲರವವಾಗಿ
ಸುಂದರ ಪಥಸಂಚಲನವ ಗೈಯಲಿ
ಚಂದಿರ ಮನದಿಂ ತಾ ಚಲಿಸಿ
ಬಂಧುರಪದಜಲಗಂಗಾಪಾತದ
ಛಂದಃಪ್ರಾಸವವನನುಸರಿಸಿ
ಕಿವಿಗಿಂಪಿನ ಸಂಗೀತವನೆರೆಯಲಿ
ಸವಿಯೂಡಿದ ನುಡಿಪೆಂಪಿನಲಿ
ಕವಿಕೋಕಿಲ ಕಲಕಂಠದೊಳಿಳಿಯಲಿ
ನವರಸಭಾವವ ಹೊಮ್ಮಿಸಲಿ.
ಡಿ.ನಂಜುಂಡ
03/07/2014
ಇಂತಹ ವರ ನನಗೂ ಸಿದ್ದಿಸಲಿ, ಎಂದು ನಮಗೂ ಹಾರೈಸುತ್ತೇನೆ ಕವಿವರ್ಯ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಬದರೀನಾಥ್
ಪ್ರತ್ಯುತ್ತರಅಳಿಸಿ