ಶುಕ್ರವಾರ, ಜುಲೈ 25, 2014

ಭಾವೈಕ್ಯ

ಉಚ್ಚರಿಸಿದಕ್ಷರದಿ ಸಂಚರಿಸು ಕ್ಷಣವೆ!
ಎಚ್ಚರವನೆಚ್ಚರಿಪ ಪದವಿರಿಸು, ಮನವೆ!

ಕಾಮಿಗಳು, ಕ್ರೋಧಿಗಳು, ಕಡು ಲೋಭಿಗಳೆ ಇರಲಿ
ಮೋಹಮದಮತ್ಸರಗಳವತಾರವೆತ್ತಿರಲಿ
ಭವರೋಗಭೋಗಾದಿ ಭಂಡಾರಖಣಿಯಿರಲಿ
ಸುಖದುಃಖಸಾಗರದೊಳೇರಿಳಿತÀದಲೆಯಿರಲಿ

ಸಂಘಟನಚತುರಾತ್ಮಚೈತನಪದಕೆ;
ನೈವೇದ್ಯದಂತೆಲ್ಲವನÀರ್ಪಿಸುತಿರದಕೆ.

ಶರಣಾಗಿ ಹಗುರಾಗಿ ನೀ ಜಗದಗಲವಾಗಿ
ಮೌನಘನದಾನಂದದೇಕರಸವಾಗಿ;
ಸೃಷ್ಟಿಕಾವ್ಯದ ವರ್ಣವೈವಿಧ್ಯತರುವಾಗಿ
ಹರಿದ್ವರ್ಣದುಸಿರಿನೊಳು ನೀನೈಕ್ಯವಾಗಿ;

ವಿಶ್ವಪ್ರಬಂಧದೊಳು ಅಕ್ಷರಗಳಂದದಲಿ
ಛಂದಃಪ್ರಾಸಗಳ ಗತಿಯು ನೀನಾಗು;
ನಿಯತದಲಿ ನೀ ಭ್ರಮಿಸಿ ಎಲ್ಲದರಲವತರಿಸಿ
ಹೃದಯದಲಿ ಒಂದಾಗಿ ಭಾವೈಕ್ಯವಾಗು.

ಡಿ.ನಂಜುಂಡ
25/07/2014
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ