ಭಾನುವಾರ, ಮಾರ್ಚ್ 29, 2015

ರಾಮ

‘ಮರ’ ‘ಮರ’ ಎಂದರೆ ಸರಸರ ಬರುವನು
ವರವೀಯುತಲಾ ಶ್ರೀರಾಮ
ಮರದೊಳಗಿನ ಮಂದಾಗ್ನಿಯ ತೆರದಲಿ
ಅರಿವೊಳಗಿಹನಾ ರಘುರಾಮ

ಹರಿವ ಹೊನಲುಗಳ ಬೆಳ್ನೊರೆ ನಗುವಲಿ
ಇರವನು ತೋರುವನರೆ ಚಣದಿ
ಮೆರೆವನು ಮೌನದ ತಳದುದ್ದಗಲದಿ
ಸರಯೂ ನೀರಂತವಸರದಿ

ಬೀಸುವ ಗಾಳಿಯೊಳೀಸುತ ಬರುವನು
ಉಸಿರೊಳು ಧುಮುಕುತಲೇಳುವನು
ಹಸಿರಲೆ ಕುಡಿಗಳಿಗೀಯುತ ಹೊಸತನು
ನಸುನಗುತಲಿ ಕುಣಿದಾಡುವನು

ಹೊಲದೊಳಗಿಹನಾ ಹಾಲ್ದೆನೆಕಾಳೊಳು
ನೆಲದೊಳಗಾ ಜಲರೂಪದೊಳು
ಒಲವಿನಲುಸುರಿದ ಒಂದಕ್ಷರವನು
ಹಲವಾಗಿಸುವಾ ಮಂತ್ರದೊಳು

ಹಕ್ಕಿಗಳುಲಿಗಳ ಬಾನಲಿ ಹರಹುತ
ಒಕ್ಕುವನಾ ಹರಿ ಪ್ರಣವವನು
ಅಕ್ಕರದುದರಕೆ ಅರ್ಥವ ತೂರಿ
ಹೊಕ್ಕೆದೆಯೊಳು ತಾ ಮೊಳಗುವನು

ಡಿ.ನಂಜುಂಡ

29/03/2015

3 ಕಾಮೆಂಟ್‌ಗಳು:

  1. ಮರಮರದ ನಡುವೆ ರಾಮನಾಮವನ್ನು ಆ ಕಾಲದಲ್ಲಿ ಹುಡುಕಿ ಕೊಟ್ಟರೆ, ನೀವು "ಅರಿವಿನ ಹರಿವು ಸರಿಯಾದ ದಿಕ್ಕಿನಲ್ಲಿದ್ದರೆ ಸರಯೂವಿನ ರಭಸದಲಿ ಬರುವನವನು" ಎಂದು ಶುದ್ಧ ಬ್ರಹ್ಮ ಪರಾತ್ಪರ ರಾಮ ತತ್ವವನ್ನು ಮಂತ್ರಿಸಿದ್ದೀರಿ. ಬಹಳ ಸೊಗಸಾಗಿದೆ  

    ಪ್ರತ್ಯುತ್ತರಅಳಿಸಿ
  2. ಭಟ್ಟರೇ ನಿಮಗೆ ನೀವೇ ಸಾಟಿ. ಹಾಡಿದರೆ ಬಲು ಸೊಗಸಾಗಿ ಮೂಡಿಬರುವುದು. ರಾಮನೆಂಬ ಪದಕ್ಕೆ ಸೂಕ್ತ ವಿವರಣೆಯೇ ಈ ಪದ್ಯ, ಇದನ್ನು ಓದಿ ನಾವು ಹೇಳಬಹುದು ಕೇವಲ
    " ಧನ್ಯೋಸ್ಮಿ"

    ಪ್ರತ್ಯುತ್ತರಅಳಿಸಿ
  3. ಬದರೀನಾರಾಯಣ ಮತ್ತು ರವಿ ತಿರುಮಲೈ ರವರಿಗೆ ಕೃತಜ್ಞತೆಗಳು

    ಪ್ರತ್ಯುತ್ತರಅಳಿಸಿ