ಸೋಮವಾರ, ಜುಲೈ 31, 2017

ಒಂದು ಪದ ಸಾಕು

ಒಂದು ಪದ ಸಾಕು, ನನ-
ಗೊಂದು ಪದ ಸಾಕು
ಅಂದ ಚಂದದ ಕೃಷ್ಣ-
ಪದವೊಂದೆ ಸಾಕು

ಭಾವಲತೆ ತಾ ಚಿಗುರಿ
ಚಿಮ್ಮುತೆಲ್ಲೆಡೆ ಹಬ್ಬಿ
ಹೂವ ಬಿಡುವಾ ಮೊದಲು ಸುತ್ತಲೇ ಬೇಕು 
ಯಾವ ಪದದೊಳು
ಕಷ್ಟಸುಖಗಳೆರಡಿಲ್ಲ
ಭಾವದರ್ಶನವೀವ ಪದವರಸಬೇಕು

ಅದು ಬೇಕು ಇದು ಬೇಕು
ಎಂಬರ್ಥ ಬಾರದಿಹ
ಪದಧೂಲಿಕಣವೊಂದು ಮೈಸೋಕಬೇಕು
ತೊದಲ ನುಡಿಗಳಲಾಡಿ
ಎದೆಯೆದೆಯಲೋಡಾಡಿ
ಮುದವೀವ ಮೊದಲ ಪದದೊಂದರ್ಥ ಸಾಕು

ಯಾವುದನು ಹೊಕ್ಕರ್ಥ
ಜಗದಗಲ ತಾ ಹರಹಿ
ನಾವು ನಮ್ಮದು ಎಂಬ ಮಮತೆಯಳಿಸಿಹುದೊ
ಭಾವದೊಳಗಾ ಅರ್ಥ-
ವೊಂದೆಯುಳಿದೆರಡಾಗಿ
ನೋವು ನಲಿವುಗಳಲ್ಲಿ ಹಲವಾಗುತಿಹುದೊ

ಅದು ಒಂದೆ ಸಾಕು ಕೃಷ್ಣ! ನಾ ಬಳಸಲು
ಪದವೊಂದೆ ಸಾಕು ನಿನ ಹಾಡಾಗಲು

ಡಿ.ನಂಜುಂಡ
31/07/2017



ಭಾನುವಾರ, ಜುಲೈ 30, 2017

ಗೋವುಗಳ ಕರೆತಾರೊ ಗೋಪಾಲ

ಗೋವುಗಳ ಕರೆತಾರೊ ಗೋಪಾಲ
ಎನ್ನೊಳಗೆ ಇಹುದೊಂದು ಗೋಮಾಳ

ನಾನು ನನ್ನದು ಎಂಬ ಚಿಗುರುಗೂಟಗಳಿಂದ
ಕಟ್ಟಿರುವ ಬೇಲಿಯನು ಕಿತ್ತು ಹಾಕಿ
ಮಾತೆಂಬ ದಬ್ಬೆಗಳನೆರಡೆರಡು ಜೋಡಿಸುತ
ಬಿಗಿದಿರುವ ಕಟ್ಟುಗಳ ಬಿಚ್ಚಿ ಹಾಕಿ
ಗೋವುಗಳ ಕರೆತಾರೊ ಗೋಪಾಲ

ಪಂಚವಿಷಯಗಳೆಂಬ ಗೊಬ್ಬರವ ಸುರಿಸುರಿದು
ಹುಲುಸಾಗಿ ಬೆಳೆಸಿಹೆನು ಹುಲ್ಲುಗಳನು
ಗೋವುಗಳು ಅದ ಮೆಂದು ಬಾಲದಲ್ಲೋಡಿಸಲಿ
ಕಾವiಮೋಹಗಳೆಂಬ ಕೀಟಗಳನು
ಗೋವುಗಳ ಕರೆತಾರೊ ಗೋಪಾಲ

ಕಳೆಗಳೆಲ್ಲವ ಕಿತ್ತು ಗೋಮತಿಯನುತ್ತು
ನಿನಗಿಷ್ಟವಾದುದನೆ ಅಲ್ಲಿ ಬಿತ್ತು
ಬಂದ ಬೆಳೆಗಳನೆಲ್ಲ ನನ್ನಿಂದಲೊಕ್ಕಿಸುತ
ಎಲ್ಲರಿಗು ಹಂಚುತಲಿ ಮೇಲಕೆತ್ತು
ಗೋವುಗಳ ಕರೆತಾರೊ ಗೋಪಾಲ

ಡಿ.ನಂಜುಂಡ

30/07/2017

ಶನಿವಾರ, ಜುಲೈ 29, 2017

ನಾನೆಲ್ಲಿಯವ? ಹೇಳು ಕಿಟ್ಟಿ!

ಅವ ದಿಲ್ಲಿಯವನಿವ ಹಳ್ಳಿಯವ
ನನ್ನೂರ ಹೇಳು ಕಿಟ್ಟಿ!
ನನ್ನಂತರಂಗ ಧ್ವನಿತಂತುಗಳನು
ಬೆರಳಿಂದಲೊಮ್ಮೆ ಮುಟ್ಟಿ
ಅವ ಸಾಹುಕಾರನಿವನವನ ದಾರ
ನಾನಾರು ? ಬಟ್ಟೆ ನೋಡು
ನಾ ಹುಟ್ಟಿ ಬೆಳೆದು ತುಳಿದಿರುವ ಮಣ್ಣ
ರಸ್ತೆಗಳ ಮೆಟ್ಟುತೋಡು
ಅವ ಬುದ್ಧಿಪಂಥನಿವ ಭಕ್ತಿಪಂಥ
ನಾನಾವ ಪಂಥ? ಹೇಳು
ಈ ಬಯಲ ದಾರಿ ತಾ ಸೇರಿದೂರ-
ಜನದನಿಗಳಾಂತು ಕೇಳು
ಅವ ಬಂದುದೇಕೆನಿವ ಸತ್ತುದೇಕೆ
ಎಷ್ಟಿಹುದು ಋಣದ ಬಾಕಿ?
ಬಾಳಡಿಗೆಮನೆಯ ನೀನಿಣುಕುತಿರುವೆ
ಹಬ್ಬಗಳನಿತ್ತ ನೂಕಿ
ಶ್ರಾವಣದ ಮಳೆಗೆ ನೀ ಹಿಡಿದ ಕೊಡೆಯ-
ಲಡಿಯಲ್ಲಿ ಜೊತೆಗೆ ಬರುವೆ
ನೀ ನೇಯ್ದು ಕೊಟ್ಟ ಬನಹೊಲಗಳುಟ್ಟ
ಹಸಿರುಡೆಯನುಟ್ಟು ನಲಿವೆ
ಡಿ.ನಂಜುಂಡ
30/07/2017



ಗುದ್ದ ನೀಡು ಕೃಷ್ಣ

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ವೇದಶಾಸ್ತ್ರೋಪನಿಷದಾದಿಗಳನೋದೋದಿ
ಪಾದೋನಪರಮಾಣುಮಾತ್ರವಂ ತಿಳಿದು
ಮಾಧವನ ಮಹಿಮಾವಿಶೇಷಗಳ ಚರ್ಚಿಸುತ
ನಾದಮೂಲಾಧಾರಮಾರ್ದನಿಯ ಮರೆತು

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ಕದ್ದುಬಿಡು, ಮತಿಯು ಮಥಿಸಿದ ಬೆಣ್ಣೆಮುದ್ದೆಗಳ
ನಿದ್ದೆಯೊಳಗೆಳೆದು ಹೃದಯದೊಳಗಡಗಿಸಿಡು
ಎದ್ದೊಡನೆ ಮತ್ತವನು ಮತಿಗೆ ಕೊಂಡೊಯ್ದು
ಪದ್ಯಪೂರಣಗೊಳಿಸಿ ಕ್ಷಣದಿ ಮೆದ್ದುಬಿಡು

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ಭಾವಪರಿಪೂರ್ಣತೆಗೆ ಯಾವ ವರ್ಣಗಳಿವೆಯೋ
ಸಾವಿರದ ಪದದೊಳಗೆ ಎಲ್ಲವನು ತುಂಬಿ
ಜೀವಭಾವದ ರಾಗದಮೃತಧಾರಾರಾಧೆ
ಸಾವಿರದೆ ತಾನುಳಿಯೆ, ನಿನ್ನ ನಂಬಿ
ನೋವಂತೆ ಹಾಡಿದುದು ಶಕುತಿದುಂಬಿ

ಬುದ್ಧನಾದೆನು ಎಂದು ಎದ್ದೆದ್ದು ಕುಣಿಯುತಿರೆ
ಬುದ್ಧಿಗೊಂದೆರಡೊದ್ದು ಗುದ್ದ ನೀಡು |ಕೃಷ್ಣ!
ಸದ್ದಡಗಿ ಬಿದ್ದೊಡನೆ ಮುದ್ದು ಮಾಡು 

ಡಿ.ನಂಜುಂಡ

29/07/2017

ಹುಡುಕಾಟ

ಕಣ್ಣ ಮುಚ್ಚೋಡದಿರು, ಕಳ್ಳ ಕೃಷ್ಣ!
ಒಳಗಣ್ಣ ಮುಚ್ಚೆನ್ನ ಕಾಡದಿರು

ನನ್ನ ಹಿಡಿ” ಎಂದೆನ್ನ ಕಣ್ಗಳೆರಡನು ಮುಚ್ಚಿ
ಎಲ್ಲಡಗಿ ಕುಳಿತೆ?, ‘ಕೂಎನಬಾರದೆ?
ಕಟ್ಟಿದಾ ಬಟ್ಟೆಯನು ಅರೆಸರಿಸಿ ನೋಡಿದರೂ
ಕಾಣದೆಯೆ ಸೋತೆ, ಕಾಣಬಾರದೇ?
ಓರೆ ನೋಟ ನಿನಗಿಷ್ಟವಾಗದೇ?

ಕಿವಿಗೊಟ್ಟು ಕೇಳಿದರೂ ಕಾಲ ಗೆಜ್ಜೆಯದೇಕೊ
ಸದ್ದು ಮಾಡುತಲಿಲ್ಲ, ಕುಣಿಸಬಾರದೇ?
ಬೆಣ್ಣೆಯನು ಮೆದ್ದಿರುವ ನಿನ್ನ ಬಾಯಿಯ ಘಮವ
ಉಸಿರಿನೊಳಗುಸ್ಸೆಂದು ಎಸೆಯಬಾರದೇ?
ಆ ಘಮವು ನನ ಮೂಗ ಸೋಕಬಾರದೇ?

ಕೃಷ್ಣ! ಬಾರೋ ಕೃಷ್ಣ!, ಎಂದೆನ್ನ ನಾಲಗೆಯು
ಕರೆಯುತಿದ್ದರೂ ಇತ್ತ ಚಿತ್ತೈಸಲಿಲ್ಲ
ನೀನು ಮುಟ್ಟಿದುದೆಲ್ಲವನು ನಾನು ಮುಟ್ಟಿದರೂ
ನನ್ನದದು ಮುಟ್ಟದಿರುಎಂದೆನ್ನುತಿಲ್ಲ
ಕೃಷ್ಣ! ನೀನೇಕೆ ತುಟಿಯಾಡಿಸುತಲಿಲ್ಲ?

ಎಲ್ಲಿ ಹುಡುಕಲಿ ಇನ್ನು, ಒಳಗೊಮ್ಮೆ ಹುಡುಕಲೇ?
ಕಣ್ಣ ಬಟ್ಟೆಯ ಕಳಚಿ ಎಸೆದೊಗೆಯಲೇ?
ನನ್ನೆಲ್ಲ ಬಟ್ಟೆಗಳ ಮೂಲೆಮೂಲೆಗೆ ತಳ್ಳಿ
ಕೋಣೆಯೊಳಗಲ್ಲಲ್ಲಿ ಇಣುಕಿ ನೋಡಲೇ?
ನಿನ್ನಾಟಗಳಿಗೆಲ್ಲ ನಾನು ಬಯಲೆ?

ಡಿ.ನಂಜುಂಡ

29/07/2017

ಗುರುವಾರ, ಜುಲೈ 27, 2017

ಪಂಚಾಮೃತ

ಮಧುಪಾತ್ರೆಯೊಲು ಪಂಚವಿಷಯಾತ್ಮಕಾಯ
ಹದವಾಗಿ ತುಂಬಿರಲು ಗೀತಾರ್ಥಪೇಯ

ದೃಷ್ಟಿ ತಾ ಸೃಷ್ಟಿಸೌಂದರ್ಯವಂ ಸೆಳೆದು
ಅಷ್ಟದಲದಲಿ ಕುಣಿವ ಕೃಷ್ಣನನು ನೆನೆಯೆ
ಇಷ್ಟಕಷ್ಟÀಸುಮವೃಷ್ಟಿಯಿಂದರ್ಚಿಸುತ
ಇಷ್ಟಿಪರಿಪೂರ್ಣತೆಯ ಸಮದೃಷ್ಟಿಯೀಯೆ

ರಾಗರಂಜಿತಭಾವಮಾಧುರ್ಯಪದಗಳಲಿ
ಯೋಗೀಶ ಕೃಷ್ಣಲೀಲೆಗಳ ಸ್ತುತಿಸಿ
ಆಗುಹೋಗುಗಳನ್ನು ತ್ಯಾಗಲಯದಲಿ ಕೇಳೆ
ಯಾಗಕುಂಡದೊಲು ಕರ್ಣಗಳನಿರಿಸಿ

ಉಷ್ಣಶೀತಲಗಳನು ಸಮತೂಕದಲಿ ಬೆರೆಸಿ
ಕೃಷ್ಣಗಂಧವನರೆದು ಹರಹುತಿರೆ ಘಮವ
ವಿಷ್ಣುವಗಲಕು ನಾಸಿಕಾಗ್ರಗಳ ತೆರೆಯುತಲಿ
ತೃಷ್ಣೆಯೊಂದಿರೆ ಮುಖ್ಯಪ್ರಾಣನಂತಿರುವ

ಗೀತೆಯೊಳತಿಳಿವೆಳೆದು ಅಕ್ಷರಕೆ ಅದ ಬಿಗಿದು
ಮಾತುಗಳ ಕುಣಿಸುತಲಿ ಜಿಹ್ವೆಯದು ಜಿಗಿಯೆ
ಮಾತ ಮೈಯಳಿದರೂ  ಕೃಷ್ಣಪದದರ್ಥವದು
ಗಾಥೆಯಾಗುಳಿದೆಮ್ಮ ಚಿತ್ತದೊಳಗಿಳಿಯೆ

ಚರ್ಮ ತಾ ಸ್ಪರ್ಶಸುಖಸಾಮ್ರಾಜ್ಯವಾಳದೆಯೆ
ಧರ್ಮನಿರಪೇಕ್ಷ ಶ್ರೀಕೃಷ್ಣನಂತುಳಿಯೆ
ಕರ್ಮದಲಿ ಕಾಯ ತಾ ನಂಟು ಬೆಳೆಸದ ಹಾಗೆ
ಕರ್ಮಗೈಯುತ ಚರಮಗತಿಯೊಂದನರಿಯೆ

ಡಿ.ನಂಜುಂಡ

28/07/2017