ಬುಧವಾರ, ಜುಲೈ 26, 2017

ತಿಳಿವೊಂದ ತೋರು

ನಿನಗೇನನರ್ಪಿಸಲಿ? ನಿನ್ನ ಹೇಗರ್ಚಿಸಲಿ?
ನಿನ್ನ ಬಿಟ್ಟಾವುದಿದೆ? ಹೇಳು ಕೃಷ್ಣ
ನಾನಿಚ್ಛಿಸಿದ ವಸ್ತು ನಿನ್ನದಾಗಿರುವಾಗ
ಕೊಡಲೇನು ಉಳಿದಿಹುದು? ತಿಳಿಸು ಕೃಷ್ಣ

ಬಯಸಿದಾ ಮನವನ್ನೆ ಬಯಲಿನಲಿ ಹರಿಬಿಟ್ಟು
"ತೆಗೆದುಕೋ, ಬಾ ಕೃಷ್ಣ" ಎನ್ನಲೇನು?
ಮನವು ನಿನಗಿಂತ ಬೇರೆಯಾದೀತೇನು?
ನಿನ್ನನ್ನೆ ನಿನಗೆಂದು ಕೊಟ್ಟ ಹಾಗೇನು?

ನೀನಲ್ಲಿ ನಾನಿಲ್ಲಿ ಎಂದು ಚಿಂತಿಸುವಾಗ
ಇಲ್ಲಿ-ಅಲ್ಲಿಯ ನಡುವೆ ಇರುವುದೇನು?
ಅಂತರವ ಚಿಂತಿಸಿದ ಮತಿಯ ಮಂತ್ರವ ಪಠಿಸಿ
ನಿನ್ನ ಪೂಜಿಪ ಬಗೆಯ ಕೇಳಲೇನು?

ಕೇಳಿದವನಾನೊಬ್ಬ ನಿನ್ನ ಬಿಟ್ಟಿಹೆನೇನು?
ಬಿಟ್ಟಿರುವ ಬಗೆಯಿರಿಸಿ ನೋಡುತಿಹೆಯ?
ನಿನ್ನ ಪೂಜಿಪೆನೆಂಬ ಸಂಕಲ್ಪವೊಂದಿಹುದೆ?
ಚಿತ್ತದೊಳಗದನೆಸೆದು ಆಡುತಿಹೆಯ?

ಜಗದಗಲ ನೋಟದಲಿ ಜಗವನ್ನೆ ನೋಡುತಿಹ
ನೀನೆ ಜಗವಾಗಿರಲು ನಾನು ಯಾರು?
ನನ್ನಿಂದ ನೀ ಬೇರೆಯೆಂದೆಣಿಪ ನನ್ನೆಣಿಕೆ-
ಕುಣಿಕೆಗಳ ಕಳೆವ ತಿಳಿವೊಂದ ತೋರು

ಡಿ.ನಂಜುಂಡ

26/07/2017

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ