ಶನಿವಾರ, ಸೆಪ್ಟೆಂಬರ್ 28, 2013

ಕಂಗಳ ತುಂಬಿಹ ಹುಣ್ಣಿಮೆ ರಾತ್ರಿ



ಅಂಬರಚುಂಬಿತ ಸುಂದರ ಗಿರಿಯಲಿ
ಚಂದಿರ ಕುಳಿತಿಹ ರಾತ್ರಿಯಲಿ.
ಹಾಲಿನ ಮಳೆಯಲಿ ಮಿಂದಿವೆ ಮರಗಳು
ತಿಂಗಳ ಹಬ್ಬದ ಹರುಷದಲಿ.

ಕುಸುಮಸುಶೋಭಿತ ಬಂಧುರತರುಗಳು
ಫಲಗಳ ಭಾರದಿ ಬಾಗುತಿವೆ.
ತನುಮನಪುಲಕಿತ ಗಂಧವಿಲೇಪಿತ
ಮಂದಸಮೀರವು ಬೀಸುತಿದೆ.

ಬನಶಂಕರಿಯಾಲಿಂಗನ ಬಿಗಿತಕೆ
ಗಿರಿಶಿವ ಸುರಿಸಿರೆ ಜಲಧಾರೆ.
ವನರಾಮಣ್ಯಕ ಗಿರಿಕಂದರದೊಳು
ಹೊನಲಿನ ಮೊಗದಲಿ ನಗೆಯ ನೊರೆ.

ಹೃನ್ಮನತನ್ಮಯಭಾವೋಲ್ಲಾಸದಿ
ಮರೆತಿರೆ ಇಹವನು ಪ್ರತಿಕ್ಷಣದಿ.
ಅಖಂಡ ಸೃಷ್ಟಿಯ ಘನರಮ್ಯತೆಯೊಳು
ಉಸಿರನು ಬೆಸೆದಿಹೆ ಅನುಕ್ಷಣದಿ.

ಡಿ.ನಂಜುಂಡ
28/09/2013




ಗುರುವಾರ, ಸೆಪ್ಟೆಂಬರ್ 26, 2013

ಒಲವಗೀತೆ!



ನಲ್ಲೆ! ನಿನ್ನೊಡನಾಟ ಚೆಲುವು ತಂದಿರೆ ಮೊಗಕೆ
ಬಾಳೆಲ್ಲ ಸರಿಗಮದ ಸುಗಮಗೀತೆ.
ಕಲ್ಲೆದೆಯ ನೆಲದಲ್ಲಿ ಒಲವನಿಂಗಿಸೆ ನೀನು
ಸಲ್ಲಾಪದಾ ಪಲುಕು ಚಿಲುಮೆಯಂತೆ.

ಮಳೆಯ ಹನಿಗಳನುಂಡು ಜಲವೊಡೆದ ಬುವಿಯಂತೆ
ಹೊಳೆಯ ಹರಿಸಿರೆ ಹೃದಯ ಒಲವ ಕುಡಿದು.
ಗೆಲುವಿನಾ ಗೆಲ್ಲೊಡೆದ ಬಳ್ಳಿಗಳು ಬಳಸುತಿವೆ
ನಲ್ಲೆ! ನಿನ್ನಯ ಸುತ್ತ ಚಿಗುರನೊಡೆದು.

ಬಾಳ ಒಸಗೆಯ ಭಾವ ಪಲ್ಲವಿಸಿ ಎದೆಬಿರಿದು
ಸೊಲ್ಲಾಗಿ ಬಳುಕುತಿದೆ ತನುಮನದಲಿ. 
ನಲ್ಲೆ! ನಿನ್ನಯ ನಗುವು ಹಾಲಿನಾ ನೊರೆತೆರದಿ
ಚೆಲ್ಲುತಿರೆ ಉಕ್ಕುತಲಿ ಬಿಸಿಯುಸಿರಲಿ.

ಡಿ.ನಂಜುಂಡ
26/09/2013

ಸೋಮವಾರ, ಸೆಪ್ಟೆಂಬರ್ 23, 2013

ನಿದ್ದೆಯಿಂದೆದ್ದು ಮೇಲೇರು ಬಾ



ಮೂಲದಿಂದ ಮೆಲ್ಲನೆದ್ದು
ಚಲಿಸಿ ಕಮಲದೊಳಗೆ ಬಾರೆ.
ಎಲ್ಲ ಗಂಟುಗಳನು ಬಿಡಿಸಿ
ಮೇಲಕೇರಿ ಸುಧೆಯ ತಾರೆ.

ಬೇಲಿ ಹೊರಗೆ ಮನಸ ತೂರಿ
ಚೆಲ್ಲುತಿರಲು ಶಕುತಿ ಹಾರಿ
ನಿಲ್ಲದಿರಲು ಎಲ್ಲೂ ನಾನು
ಮಲಗಿ ನಿದ್ದೆ ಹೋದೆ ನೀನು.

'ಇನ್ನು ಬೇಕು' ಎಂಬ ಸುರೆಯ
ತಂದು ಸುರಿದು ಬೆರೆಸಿ ಕುಡಿಯೆ
'ನಾನು' ಎಂಬ ಅಮಲಿನಲ್ಲಿ
ಕಣ್ಣ ಮುಚ್ಚಿ ಒಳಗಿನಲ್ಲಿ.

ಅಂಬೆಗಾಲನಿಕ್ಕಿ ಬಂದು
ಮುಂಬಾಗಿಲ ಎದುರು ನಿಂದು
ಚಿಮ್ಮಿ ಚಿಮ್ಮಿ ಏಣಿಯೇರು
ಸುಮ್ಮನೊಮ್ಮೆ ಕೆಳಗೆ ಜಾರು.

ಲಲಿತೆ! ನೀನು ಮೊದಲ ಬಾಲೆ
ಲಲಿತಪದವನಿರಿಸಿ ಮೇಲೆ
ಮೆಲ್ಲ ಮೆಲ್ಲನೇರಿ ನಿಲ್ಲು
ಮೊಲ್ಲೆ ಹೂವ ನಗುವ ಚೆಲ್ಲು.

ಡಿ.ನಂಜುಂಡ.
23/09/2013

ಶನಿವಾರ, ಸೆಪ್ಟೆಂಬರ್ 21, 2013

ಬಾಗಿ ಬಾ ಬಾನಿಂದ ಬೆಳಕ ಕುಡಿಯೆ!



ಬಾಗಿ ಬಾ ಬಾನಿಂದ ಬೆಳಕ ಕುಡಿಯೆ!
ಹಗಲಿನಾ ಕತ್ತಲೆಯ ಕಳೆದು ರವಿಯೆ!

ಎದೆಯ ಒಲೆಯಲಿ ಹೊಕ್ಕು
ತಿದಿಯ ತಿರುಗಿಸಿ ಒಮ್ಮೆ
ಹದಗೊಳಿಸಿ ಕಣ್ಣೊಳಗೆ ಹೊಳಪನಿಟ್ಟು.
ಕಾದ ಕಬ್ಬಿಣದಂತೆ
ಮೆದುಗೊಳಿಸಿ ಕೆಂಪಾದ
ಮದಭರಿತ ಮಮಕಾರಗಳನು ಸುಟ್ಟು.

ಕಾಮಕ್ರೋಧದ ಕಿಡಿಗೆ
ಮೈಮನವು ಹೊತ್ತುರಿದು
ಕಮರುತಿರೆ ಕರಿಹೊಗೆಯು ಮೆತ್ತಿ ಮೆತ್ತಿ
ಯಮನಿಯಮಗಳ ಹವಿಯ
ಹೋಮಾಗ್ನಿಜ್ವಾಲೆಯಲಿ
ಹೊಮ್ಮಿಸುತ ಹೊಂಬೆಳಕ ತಮವ ನೀಗಿ.

ಸಂತೆಯಾ ಗದ್ದಲದಿ
ನಿಂತಿರುವ ನಮ್ಮೊಳಗೆ
ಸಂತಕಿರಣವು ನುಸುಳಿ ಒಳಗೆ ಬರಲಿ.
ಸಂತತದ ಅರಿವಿನಲಿ
ಚಿಂತೆಗಳ ಬಲೆ ಗುಡಿಸಿ
ಸಂತಸದ ಹೊಂಗಿರಣ ತಾ ಚಿಮ್ಮಲಿ.
 
ಡಿ.ನಂಜುಂಡ.
21/09/2013





ಮಂಗಳವಾರ, ಸೆಪ್ಟೆಂಬರ್ 17, 2013

ಭಾವನಿಬಂಧ



ಛಂದಾವರಣದಿ ಬಂಧಿತವಾಗಿರೆ
ಭಾವಾಲಾಪದ ಅನುರಣನ.
ಸಂಧ್ಯಾರಾಗಾಲೇಪಿತ ಹೃದಯದಿ
ಅರುಣೋದಯ ನವ ಆವರಣ.

ಚಿತ್ತವೃತ್ತಿಗಳಾ ಚಿತ್ರಿತಕುಸುಮದಿ
ಮಧುರಾಕ್ಷರಗಳ ಸಂಮಿಲನ.
ಸ್ವರಮಧುಕರಗಳು ಚುಂಬಿಸೆ ಪುಷ್ಪವ
ತನುಮನವ್ಯಂಜನವ್ಯಾಕರಣ.

ಕರ್ಣಾಲಿಂಗಿತ ಝಂಕೃತಿಪದಗಳ
ನಿಯತಾವರ್ತದ ಸಂಚರಣ.
ನಾದರತೋತ್ಸವಪುಳಕಿತ ವದನದಿ
ಕವಿತಾಸಂತತಿಸಂಜನನ.

ಅಣುರೇಣುಗಳಾ ಅಂತಃಕರಣವೆ
ವೀಣಾಪಾಣಿಯ ಸಂಸದನ.
ಕಣಕಣಕಂಪಿತ ನುತಸ್ವರಗಣಗಳೆ
ವಾಣಿಗೆ ಅರ್ಪಿತ ಆಭರಣ.

ಡಿ.ನಂಜುಂಡ.
17/9/2013