ಸೋಮವಾರ, ಜುಲೈ 27, 2015

ವಿಶ್ರಮಿಸು ಮನವೆ!

ಷಟ್ಪದವೆ! ಸಂಕ್ರಮಿಸು ಹೃತ್ಪಥದಿ ಝೇಂಕರಿಸು
ಅಷ್ಟದಲಮಧ್ಯದಲಿ ಸಂಭ್ರಮಿಸಿ ಸುಖಿಸು
ದೃಷ್ಟ್ಯಾದಿ ಪಂಚಾಂಗವಿಷಯಗಳ ಸಂಹರಿಸಿ
ಸೃಷ್ಟ್ಯಾದಿ ಸಂಪದವ ಸಂಚಲನಗೊಳಿಸು

ಪರಮಾಣುಸಂಚಲಿತ ಸ್ವರಭಾರಸಂಕಲಿತ
ಪರಿಪೂರ್ಣನಾದಾಂತಪೂರದೊಳು ಹರಿದು
ಹರಿತತ್ತ್ವಸಂಕಾಶದಾಕಾಶದಾದ್ಯಂತ
ಹರಹಿದಾ ಹರತತ್ತ್ವ ಡಮರುಗದಿ ಸಿಡಿದು

ಕಾಮಾದಿಷಡ್ವೈರಿಶೀರ್ಷಗಳ ಚೆಂಡಾಡು
ಮಮಕಾರಮೂಲಗಳ ಬಿಡದೆ ತುಂಡರಿಸು
ಅಮರಪದಪದ್ಮಾಂತರಾಲದಲಿ ವಿಶ್ರಮಿಸಿ
ಭ್ರಮರ! ನೀ ಭ್ರಮಣವನು ಸಂಪೂರ್ಣಗೊಳಿಸು.

ಡಿ.ನಂಜುಂಡ

27/07/2015

ಶನಿವಾರ, ಜುಲೈ 25, 2015

ಸದಾಶಯ

ಮಳೆ ಸುರಿಯಲಿ ಹೊಳೆ ಹರಿಯಲಿ
ಜಲದೊರತೆಗಳೊಡೆಯಲಿ
ತಳ ತಂಪಿನ ನೆಲಗಂಪಲಿ
ಬೆಳೆಗಳು ನಳನಳಿಸಲಿ 

ಮರಮರಗಳು ನಲಿಯುತಿರಲಿ
ಸ್ವರಸಂಪದದಿಂಪಲಿ
ಥರ ಥರ ಖಗಚರಗಳೆಲ್ಲ
ಗರಿಗೆದರಲಿ ಗುಂಪಲಿ

ಉಸಿರುಸಿರಿಗೆ ಹೊಸ ಹುರುಪಿನ
ಸಸಿಗಳ ಕಸಿಗಟ್ಟಲಿ
ತುಸು ನಾಚಿದ ನಸು ನಗೆಗಳ-
ನೆಸೆಯುತ  ತುಟಿ ತಟ್ಟಲಿ

ಸೃಷ್ಟಿಯೊಲವು ದೃಷ್ಟಿಗಿಳಿದು
ಕಷ್ಟವೆಲ್ಲವಳಿಯಲಿ
ಅಷ್ಟದಳದಲಿಷ್ಟದೇವ-
ನಷ್ಟರೂಪವುಳಿಯಲಿ.

ಡಿ.ನಂಜುಂಡ
25/07/2015

ಬುಧವಾರ, ಜುಲೈ 22, 2015

ಕಾಲ

ನಾಳೆಯನಿಂದೇ ನೋಡುವ ಆಸೆಯು
ಈಡೇರುವುದೇ ಇಲ್ಲ
ನಿನ್ನೆಯ ನೋಡಲು ಹಪಹಪಿಸಿದರೂ
ಕಾಣಲು ಆಗುವುದಿಲ್ಲ

ಕಾಲವು ಚಲಿಸುವ ಗತಿಯನು ಮೀರಿ
ದೇಹವು ಚಲಿಸುವುದಿಲ್ಲ
ಮನಸಿನ ಆತುರ-ಕಾತುರಕೆಲ್ಲ
ಕಾಲದ ಸ್ಪಂದನೆಯಿಲ್ಲ

ಕಾಲದ ಪಕ್ವವನರಿಯುತ ಬೇಯಿಸೆ
ಪಾಕವು ರುಚಿಕಟ್ಟಾಗುವುದು
ಯಂತ್ರದ ಬಲದೊಳಗನ್ನವ ಬೇಯಿಸೆ
ಅಂತಃಶಕ್ತಿಯು ಕುಂದುವುದು

ನಾಳೆಯ ಅನ್ನವನಿಂದೇ ಬೇಯಿಸೆ
ತಿನ್ನುವ ಸಮಯಕೆ ಹಳಸುವುದು
ನಿನ್ನೆಯ ಹಳಸಲ ವಾಸನೆಯಂತೆ
ಕಳೆದಿಹ ಕಾಲವು ಕಾಡುವುದು

ಕಾಲದ ತಾಳಕೆ ಹೆಜ್ಜೆಯನಿಕ್ಕುತ
ಬಾಳೊಳು ನಾಟ್ಯವನಾಡುತಿರೆ
ಕಾಲದ ಅನುಭವಸಾಗರದಲೆಯೊಳು
ಚಲಿಸುವ ಮನ ತಾ ನಿಲ್ಲುತಿರೆ

ನಾಟ್ಯವ ನೋಡುವ ನೋಡುಗನೇ
ನಾಟ್ಯವನಾಡುವನಾಗುವನು
ನೋಡುಗನವನೇ ಆಡುಗನಾಗಿ
ನೋಡುವ ನೋಟವೆ ಗುವನು

ಡಿ.ನಂಜುಂಡ

22/07/2015

ಸೋಮವಾರ, ಜುಲೈ 20, 2015

ಸೃಷ್ಟಿ

ಕವಿಯ ಭಾವಜಲಧಿಯೊಲವು
ಮೇಲೆಕೇರಿ ಬಾಗಿದೆ
ಗಿರಿವನಗಳ ಸಾಲುಗಳಲಿ
ಮಳೆಯಾಗಿಳೆಗಿಳಿದಿದೆ

ಕವಿಯೆದೆಯೊಳಗೊರತೆಯೊಡೆದ
ಕಾವ್ಯರಸವು ಕುಲುಕಿದೆ
ತಳುಕು ಬಳುಕಿನಲ್ಲಿ ಧುಮುಕಿ
ಹರಿಯುವ ಹೊಳೆಯಾಗಿದೆ

ಕವಿಯು ಬರೆದ ಅಕ್ಷರಗಳು
ಕಾನನದೆಡೆ ಹಾರಿವೆ
ಹಕ್ಕಿಗಳಲಿ ಒಗ್ಗೂಡುತ
ಕಲರವದೊಳು ತೇಲಿವೆ

ಕವಿಯ ದೃಷ್ಟಿಕಿರಣದೋಟ
ಜಗದ ಎಲ್ಲೆಗೋಡಿದೆ
ಕೊನೆಯು ಕಾಣದಾಗ ಇಂತು
ಸೃಷ್ಟಿಯ ಚೆಲುವಾಗಿದೆ.

ಡಿ.ನಂಜುಂಡ

20/07/2015

ಭಾನುವಾರ, ಜುಲೈ 19, 2015

ಮಳೆನಾಡು

ಗಿರಿವನಗಳಿಗಪ್ಪಳಿಸಿಹ ಕಾರ್ಮೋಡದ ಬಿರುಹೊಡೆತಕೆ
ನಡುಹಗಲಲಿ ಧರೆಗಿಳಿದಿಹ ನಟ್ಟಿರುಳಿನ ಕಾಲ್ತುಳಿತಕೆ
ಕಾಣುವುದೆಲ್ಲವೂ ಕಾರ್ನಾಡು;
ಎಲ್ಲಿದೆ ನಮ್ಮಯ ಮಲೆನಾಡು

ಆಷಾಡದ ಜಿಹ್ವೆಯ ಮೇಲುದ್ಘೋಷಿತ ಶತರುದ್ರಕೆ
ಗೋರ್ಕಲ್ಲಲಿ ಮೈನೆರೆದಿಹ ಸುರಗಂಗೆಯ ಸಂಚಲನಕೆ
ಕೆನ್ನೀರೊಡೆದಿದೆ ಮಣ್ಣೊಲವು;
ಉಬ್ಬಿವೆ ಎಲ್ಲಾ ಹೊಳೆ ಹರಿವು

ಕಾಲುವೆಗಳ ಕಾಲೊಡಿದಿವೆ ಅಣೆಕಟ್ಟಿನ ಹಣೆಯೊಡೆದಿದೆ
ನಡು ರಸ್ತೆಯು ತುಸು ಹೆದರಿದೆ; ನೀರಾಳದಿ ತಾನಡಗಿದೆ 
ಕೆರೆಕಟ್ಟೆಯು ಬಿರುಬಿಟ್ಟಿರೆ ಇಲ್ಲಿ
ಒಗ್ಗೂಡುತಿರೆಲ್ಲಾ ಜಲವಿಲ್ಲಿ

ಎಲ್ಲಿದೆ ನಮ್ಮಯ ಮಲೆನಾಡು?
ನಮ್ಮೆದುರಿರುವುದು ಮಳೆನಾಡು

ಡಿ.ನಂಜುಂಡ

19/07/2015

ಶನಿವಾರ, ಜುಲೈ 18, 2015

ಸಂಭಾಷಣೆ

ನಾನೀಗ ಅಂಗಡಿಗೆ ಹೊರಟಿಹೆನು ನಲ್ಲೆ!
ಏನೇನು ತರಬೇಕು? ಬೇಗ ಹೇಳೆ
ಬೆಲ್ಲ, ಸಕ್ಕರೆ, ಎಣ್ಣೆ ಮತ್ತೆ ಕಡಲೆಯ ಬೇಳೆ 
ಎಲ್ಲವನೂ ತಂದು ಬಿಡು; ಹಬ್ಬ ನಾಳೆ

ಬೇಕುಬೇಡಗಳ ನೀ ಚೀಟಿಯಲಿ ಬರೆದು ಕೊಡೆ
ಮರೆಯದೇ ಪ್ರತಿಯೊಂದೂ ತಂದುಬಿಡುವೆ
ಎಲ್ಲವನೂ ಚೀಟಿಯಲಿ ಬರೆದಿಹೆನು ಎಲೆ ನಲ್ಲ!
ಕೊಂಡು ಬಾ, ಕಾಫಿಯನು ಮಾಡಿಕೊಡುವೆ

ಚೀಟಿ ಒಯ್ಯಲು ಮರೆತು ಬೆಲ್ಲವನು ತರಲಿಲ್ಲ
ಸಿಹಿಗೆ ಸಕ್ಕರೆಯೊಂದೇ ಸಾಕಲ್ಲವೆ?
ಬೆಲ್ಲವನು ತರಲಿಲ್ಲವೇಕೆ ಹೇಳೆಲೆ ನಲ್ಲ!
ಹೋಳಿಗೆಯ ಮಾಡಲದು  ಬೇಕಲ್ಲವೆ?

ಬೆಳಗಾಗಿ ನಾನೆದ್ದು ಸಿದ್ಧ ಹೋಳಿಗೆ ತರುವೆ
ಸಿಡುಕಿ ಚೆಲುವನು ಚೆಲ್ಲುತಿರುವುದೇಕೆ?
ಬೆಲ್ಲ ಬೇಡವೆ ನಲ್ಲ! ಅಲ್ಲನಿಗೆ ಅರ್ಪಿಸಲು
ಬೇಕುಗಳ ತರುವುದಕೆ ಮರೆವು ಏಕೆ?

ಚಂದವೋ ಚಂದವದು ನಲ್ಲನಲ್ಲೆಯ ಬಂಧ
ಬೆಲ್ಲ ಬೇಳೆಯ ಹಾಗೆ ಅವರ ಸಂಬಂಧ
ಬೆಲ್ಲವನು ತಂದಿಲ್ಲವಿಂತೆಂಬ ನೆವದಲ್ಲಿ
ಮಾತಾಡೆ ಚೆಲ್ಲುವುದು ಮಲ್ಲಿಗೆಯ ಗಂಧ

ಡಿ.ನಂಜುಂಡ

18/07/2015

ಶುಕ್ರವಾರ, ಜುಲೈ 17, 2015

ಬಾ, ಹಣ್ಣ ಕೊಡುವೆ

ಎಲೆ ಬಾಲ! ನೀನಾರು? ನಿನ್ನಯಾ ಹೆಸರೇನು?
ಎಷ್ಟನೆಯ ತರಗತಿಯಲೋದುತಿರುವೆ?
ಹಾದಿಯೊಳು ಸಾಗಿ ಊರ ಶಾಲೆಗೆ ಹೋಗಿ
ಹಿಂತಿರುಗಿ ಬರುವಾಗ ಹಣ್ಣ ಕೊಡುವೆ

ನಾನು ನೆಟ್ಟಿಹ ಹಲಸು ಫಲವ ಕೊಟ್ಟಿದೆ ಇಂದು
ಹಿಸಿದು ಇಟ್ಟಿಹೆನದರ ಒಂದು ಭಾಗ
ಸಂಜೆ ನೀ ಬಂದು ತಿಂದು ಮುಂದಕೆ ಹೋಗು
ಬೀಜಗಳ ಬನದೆಡೆಗೆ ಎಸೆದು ಸಾಗು

ನಾ ಮರವ ಬೆಳೆಸಿಹೆನು; ನಾನದರ ಯಜಮಾನ
ಮರವಿತ್ತ ಫಲದಲ್ಲಿ ನಾನೆ ಇಹೆನು
ನಾನು ನಾನುಗಳ ಕೂಡಿಸಿಟ್ಟಿಹೆÀ ನೋಡು
ಕಳೆಯಬೇಕೆಲ್ಲವನು ಕೊನೆಗೆ ನಾನು

ನೀನು ಕೂಡುವ ಕ್ಷಣದಿ ನನ್ನದೆಲ್ಲವ ಕಳೆದು
ಮರದ ಬೇರೊಳು ಸರಿದು ಚಿಗುರನೇರಿ;
ನೀ ಗುಣಿಪ ಮರಮರದಿ ನಾನುಗಳ ಭಾಗಿಸುವೆ
ಸೊನ್ನೆಯಾಗುವ ತನಕ; ಹಲವು ಬಾರಿ.

ಡಿ.ನಂಜುಂಡ

18/07/2015