ಗುರುವಾರ, ಜುಲೈ 16, 2015

ಮಾತು

ಅಂತರಂಗದ ಮೌನ ತಾನೆದ್ದು ಕುಣಿಯುವುದು
ಅಖಿಲಚೇತನದೊಲವು ಅಂಕುರಿಸಿದಾಗ
ಜಿಹ್ವೆಯೊಳಗಾಡುತಿಹ ನುಡಿಸಿರಿಯು ನಮದಲ್ಲ
ಪದಗಿರಿಜೆಯನು ಅರ್ಥಶಿವನಪ್ಪಿದಾಗ 

ಮಾತುಗಳು ಮುಗಿದರೂ ಮುಗಿಯದದರರ್ಥಗಳು
ವಿಶ್ವಮೌನದ ಜಲಧಿಯಲೆಯಾಗಿ ಕುಣಿದು
ಕಡಲ ಸೇರಿದ ಹೊನಲು ಆಗಸಕೆ ತಾನೇರಿ
ಮಳೆಯಾಗಿ ಸುರಿವಂತೆ ಮನದಾಳಕಿಳಿದು

ಮತ್ತೊಂದು ನುಡಿಯರಸಿ ಮತ್ತದನು ವರಿಸಿ
ಸೃಷ್ಟಿತಾಳದ ಗತಿಗೆ ಚಿತ್ತದೊಳು ಚಲಿಸಿ
ಭಾವವರ್ಣದಿ ಮಿಂದ ಜೀವದೊಳಗೊಂದಾಗಿ
ಅವತಾರವೆತ್ತುವುದು ಮಾತಿನೊಳು ಜನಿಸಿ

ಡಿ.ನಂಜುಂಡ

16/07/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ