ಭಾನುವಾರ, ಜುಲೈ 12, 2015

ಮಲೆನಾಡ ಅಡವಿ

ಮಲೆನಾಡಿನಡವಿಯೊಳಗಲೆದಾಡು ಕುಣಿದಾಡು
ಒಲವ ಪ್ರತಿಮೆಗಳನೀನಲ್ಲಿ ನೋಡು 
ಚೆಲುವು ಚಲಿಸುವ ಕಾಡು ಲಲಿತ ಕಲೆಗಳ ಬೀಡು
ನಲವು ತಾನಲ್ಲಿ ನೆಲೆಸೆ ದೆತುಂಬಿ ಹಾಡು

ಎಲೆಗಳಲಿ ತಳಹಾಸಿ ಕೈಬೀಸಿ ಕರೆಯುತಿದೆ
ಫಲವಿರಿಸಿ ರೆಂಬೆಗಳನಿಳೆಗೆ ತಾಗಿಸಿದೆ
ಹೊಳೆ ತಾನು ಕೆಳ ಹಾರಿ ನಗೆಮೋರೆಯನು ತೋರಿ
ತಲೆಮೇಲೆ ಜಲವೆರಚಿ ಶುಭವ ಹರಸುತಿದೆ

ತಂಗಾಳಿಯನು ಬೀಸಿ ಹಸಿರುಸಿರನೆಮಗಿತ್ತು
ಅಂಗಾಂಗಗಳಿಗೆಲ್ಲ ಹುರಪನೂಡಿಸಿದೆ
ರಂಗುರಂಗುಗಳಲ್ಲಿ ನವಿಲುಗಳ ಸಿಂಗರಿಸಿ
ಶೃಂಗಾರಭಾವಗಳ ಕರೆದು ಕುಣಿಸುತಿದೆ

ಬೀಳುಗೀಳುಗಳಲ್ಲಿ ಮೇಲಮೇಲಕೆ ಸಾಗಿ
ಬಾಳ ಬೀಳನು ಮರೆವ ಆಟಗಳನಾಡು
ಆಲಬೇಲಗಳಲ್ಲಿ ನಾಳೆಯೇಳ್ಗೆಯ ಕಂಡು
ಬಾಲಬಾಲರ ಮುಂದೆ ನಾಡ ಕೊಂಡಾಡು.

ಡಿ.ನಂಜುಂಡ

12/07/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ