ಗಿರಿವನಗಳಿಗಪ್ಪಳಿಸಿಹ ಕಾರ್ಮೋಡದ ಬಿರುಹೊಡೆತಕೆ
ನಡುಹಗಲಲಿ ಧರೆಗಿಳಿದಿಹ ನಟ್ಟಿರುಳಿನ ಕಾಲ್ತುಳಿತಕೆ
ಕಾಣುವುದೆಲ್ಲವೂ ಕಾರ್ನಾಡು;
ಎಲ್ಲಿದೆ ನಮ್ಮಯ ಮಲೆನಾಡು
ಆಷಾಡದ ಜಿಹ್ವೆಯ ಮೇಲುದ್ಘೋಷಿತ ಶತರುದ್ರಕೆ
ಗೋರ್ಕಲ್ಲಲಿ ಮೈನೆರೆದಿಹ ಸುರಗಂಗೆಯ ಸಂಚಲನಕೆ
ಕೆನ್ನೀರೊಡೆದಿದೆ ಮಣ್ಣೊಲವು;
ಉಬ್ಬಿವೆ ಎಲ್ಲಾ ಹೊಳೆ ಹರಿವು
ಕಾಲುವೆಗಳ ಕಾಲೊಡಿದಿವೆ ಅಣೆಕಟ್ಟಿನ ಹಣೆಯೊಡೆದಿದೆ
ನಡು ರಸ್ತೆಯು ತುಸು ಹೆದರಿದೆ; ನೀರಾಳದಿ ತಾನಡಗಿದೆ
ಕೆರೆಕಟ್ಟೆಯು ಬಿರುಬಿಟ್ಟಿರೆ ಇಲ್ಲಿ?
ಒಗ್ಗೂಡುತಿರೆಲ್ಲಾ ಜಲವಿಲ್ಲಿ
ಎಲ್ಲಿದೆ ನಮ್ಮಯ ಮಲೆನಾಡು?
ನಮ್ಮೆದುರಿರುವುದು ಮಳೆನಾಡು
ಡಿ.ನಂಜುಂಡ
19/07/2015
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ