ಎಲೆ ಬಾಲ! ನೀನಾರು? ನಿನ್ನಯಾ ಹೆಸರೇನು?
ಎಷ್ಟನೆಯ ತರಗತಿಯಲೋದುತಿರುವೆ?
ಈ ಹಾದಿಯೊಳು ಸಾಗಿ ಊರ ಶಾಲೆಗೆ ಹೋಗಿ
ಹಿಂತಿರುಗಿ ಬರುವಾಗ ಹಣ್ಣ ಕೊಡುವೆ
ನಾನು ನೆಟ್ಟಿಹ ಹಲಸು ಫಲವ ಕೊಟ್ಟಿದೆ ಇಂದು
ಹಿಸಿದು ಇಟ್ಟಿಹೆನದರ ಒಂದು ಭಾಗ
ಈ ಸಂಜೆ ನೀ ಬಂದು ತಿಂದು ಮುಂದಕೆ ಹೋಗು
ಬೀಜಗಳ ಬನದೆಡೆಗೆ ಎಸೆದು ಸಾಗು
ನಾ ಮರವ ಬೆಳೆಸಿಹೆನು; ನಾನದರ ಯಜಮಾನ
ಮರವಿತ್ತ ಫಲದಲ್ಲಿ ನಾನೆ ಇಹೆನು
ಈ ನಾನು ನಾನುಗಳ ಕೂಡಿಸಿಟ್ಟಿಹೆÀ ನೋಡು
ಕಳೆಯಬೇಕೆಲ್ಲವನು ಕೊನೆಗೆ ನಾನು
ನೀನು ಕೂಡುವ ಕ್ಷಣದಿ ನನ್ನದೆಲ್ಲವ ಕಳೆದು
ಮರದ ಬೇರೊಳು ಸರಿದು ಚಿಗುರನೇರಿ;
ನೀ ಗುಣಿಪ ಮರಮರದಿ ನಾನುಗಳ ಭಾಗಿಸುವೆ
ಸೊನ್ನೆಯಾಗುವ ತನಕ; ಹಲವು ಬಾರಿ.
ಡಿ.ನಂಜುಂಡ
18/07/2015
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ