ಭಾನುವಾರ, ಮೇ 12, 2013

ಮೋಡವೆಂಬ ಮಾಯಾರೂಪಸಿ!ಶ್ಯಾಮಲವರ್ಣದ ಅತಿಶಯಸುಂದರ
ಮಾಯಾರೂಪವ ನೋಡಲ್ಲಿ.
ಗಿರಿವನಚುಂಬನದಾತುರ ತನುವದು
ಬಾಗಿರೆ ನಾಚುತ ಬಾನಿನಲಿ.

ಚಂಚಲ ನೋಟಕೆ ಕಂಪಿತ ಗಿರಿಮೊಗ
ಕರೆದಿರೆ ಸಖಿಯನು “ಬಾ ಇಲ್ಲಿ”.
ಹಸಿರೆಲೆ ತೋರಣ ಬಾಗಿಲಿಗಿಟ್ಟಿವೆ
ಕುಣಿಯುತ ಬನಗಳು ಹುರುಪಿನಲಿ.

ಗಿರಿಯಾಲಿಂಗನ ಸುಮಹಿತಸ್ಪರ್ಶಕೆ
ಕರಗಿರೆ ತನುಮನ ಶಿಖರದಲಿ.
ಉಡುಗೆಯ ಸಡಿಲಿಸಿ ನಡುವನು ಕೊಂಕಿಸಿ
ಮಿಂದಳು ಸುಂದರಿ ಹೊನಲಿನಲಿ.

ನವ್ಯಾಂಬರಗಳ ಧರಿಸುತ ನಡೆದಳು
ಬಳುಕುತ ಹೊನಲೊಳು ಒನಪಿನಲಿ.
ಉಡುಗೆಯ ಕಳಚುತ ನಿಂದಳು ಕಡಲಲಿ
ಬಾನನು ಸೇರುವ ತವಕದಲಿ.ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ