ಶುಕ್ರವಾರ, ಮೇ 17, 2013

ಕಿವುಡ-ಕುರುಡ- ಮೂಕ-ಕುಂಟ



ಪ್ರೀತಿಸುವ ಹೃದಯಗಳು ಪಿಸುಮಾತ ಕೇಳುವುವು
ದೂರವಿದ್ದರು ಕೂಡ ಕಿವಿಯಗೊಟ್ಟು.
ದೇಹವಿದ್ದರು ಸನಿಹ ದ್ವೇಷವಿದ್ದರೆ ಅಲ್ಲಿ
ಕೇಳಿಸವು ಬಿರುದನಿಯು ಕಿವುಡೆ ಎಲ್ಲ.

ಕುರುಡರೆಲ್ಲರು ನಾವು ಒಳಗಣ್ಣು ಮುಚ್ಚಿರಲು
ಹೊರಗಣ್ಣ ನೋಟವದು ದಿಟವೆ ಅಲ್ಲ.
ಇರುಳಿನಲು ಕಾಣುವುದು ಒಳಗಣ್ಣ ತೆರೆದವಗೆ
ಹಗಲಿನಲು ಕತ್ತಲೆಯೆ ಮುಚ್ಚಿದವಗೆ.

ಮೂಕಹಕ್ಕಿಯ ಮಾತು ಗೀತವಾಗಿದೆಯಲ್ಲಿ
ಸ್ವಾರ್ಥವಿಲ್ಲದ ಪ್ರಕೃತಿ ಭಾಷೆಯೆಲ್ಲ
ಸ್ವಾರ್ಥಬದುಕಿನ ಮನಕೆ ಅರ್ಥವಾಗದು ಶಕುನ
ಸ್ಪಷ್ಟಮಾತಿನ ಹಕ್ಕಿ ಭಾಷ್ಯವೆಲ್ಲ.

ಕುಂಟು ಕಾಲಿನ ನಡೆಗೆ ಸನಿಹವಾಗಿದೆ ಗುರಿಯು
ಕುಂಟು ಮನಗಳಿಗೆಲ್ಲ ಗುರಿಯೆ ಇಲ್ಲ.
ದಾರಿ ತಪ್ಪಿದ ನಡಿಗೆ ನೇರವಿದ್ದರು ಕುಂಟೆ
ಅಂಟು ಮೆತ್ತಿದೆ ಅಲ್ಲಿ ಕುಂಟು ಮನಕೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ