ತನು ಉದುರಿ
ಮಣ್ಣಾಗಿ
ಮನ ಚಿಗುರಿ
ಮರವಾಗಿ
ಹೃದಯಭಾವಗಳೆಲ್ಲ
ಹೂವಾಗಲಿ.
ಚಿತ್ತಸಂಕಲ್ಪಗಳು
ಪರಿಪೂರ್ಣ
ಫಲವಾಗಿ
ಹೋಮಾಗ್ನಿಕುಂಡದಲಿ
ಹವಿಯಾಗಲಿ.
ಹುತಹವಿಯ
ಹೊಗೆಯೆಲ್ಲ
ಮುಗಿಲುಗಳ
ಕಣವಾಗಿ
ಎಲ್ಲೆಲ್ಲು
ಹದವಾದ ಮಳೆಸುರಿಯಲಿ.
ಮಳೆಯ
ಹನಿಗಳನುಂಡು
ಇಳೆಯ
ಬಸಿರೊಡೆದೊಡೆದು
ಹೊಲತುಂಬ
ಹಾಲ್ದೆನೆಯ ಕಾಳಾಗಲಿ.
ಹಿಗ್ಗಿನಲಿ
ಒಕ್ಕಲಿಗ
ಸುಗ್ಗಿಯಲಿ
ಮೈಮರೆತು
ಎದೆತುಂಬಿ
ಸವಿನುಡಿದು ಕುಣಿದಾಡಲಿ.
ಕುಣಿದೆದೆಯ
ತಾಳದಲಿ
ಸಂಸಾರ
ಶ್ರುತಿಬೆರೆತು
ನೆಮ್ಮದಿಯ
ರಾಗಗಳು ಮೇಳೈಸಲಿ.
ನೆಮ್ಮದಿಯ
ಅನುಭವದಿ
ಪೂರ್ಣತೆಯ
ಫಲವುಂಡು
ತನುವುದುರಿ
ಭೂತಾಯ ಮಣ್ಣಾಗಲಿ.
ಜೀವನದ
ನಶ್ವರವ
ಚೇತನದ
ಶಾಶ್ವತೆಯ
ಅರಿವುಂಡು
ಪ್ರಕೃತಿಯಲಿ ಒಂದಾಗಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ