ಬುಧವಾರ, ಮೇ 29, 2013

ಅರಿವಿನೆಡೆಗೆ ಚಲಿಸೆನ್ನ ಮನವೆ!ಓಡುತಿಹೆ ಎಲೆ ಮನವೆ! ಗೊತ್ತು ಗುರಿಯಿಲ್ಲದೆಯೆ
ಕೇಳೆನ್ನ ನುಡಿಯೊಂದ ಇತ್ತ ಬಾ.
ಬಾನಿನಲಿ ತೇಲುತಿರೆ ಮರೆಯದಿರು ಭೂಮಿಯನು
ಇಳೆಗಿಳಿದು ಮಳೆಯಾಗಿ ಮತ್ತೆ ಬಾ.

ಗಮನವನು ಇಟ್ಟೊಡನೆ ಕುಳಿತಲ್ಲೆ ನೀನಿರುವೆ
ತಪ್ಪಿದೊಡೆ ಓಡುತಿಹೆ ಬಾನಿನೆಡೆಗೆ.
ವ್ಯೋಮದಲೆ ತೇಲಾಡಿ ಜೊಳ್ಳಾಗದಿರು ಮನವೆ!
ಘನವಾಗಿ ತಲೆಬಾಗು ಇಳೆಯ ಕಡೆಗೆ.

ಕಣಕಣವು ನೀರಾಗಿ ಸುರಿಯುತಿರು ಇಳೆಯಲ್ಲಿ
ಎದೆತುಂಬಿ ಹೊನಲಾಗು ಭಾವದೆಡೆಗೆ.
ಹೃದಯವೇ ಇಳೆಯೆಂಬ ತಿಳಿವನ್ನು ನೀನ್ ತಳೆದು
ಹರಿವಾಗು ಎಲೆ ಮನವೆ! ಒಲವಿನೆಡೆಗೆ.

ಒಲವಿನಲಿ ನೆಲೆಯಾಗಿ ಸಮರಸದ ಹರಿವಾಗಿ
ಕುಳಿತಲ್ಲೆ ಓಡಿಬಿಡು ಅರಿವಿನೆಡೆಗೆ.
ವ್ಯೋಮದಲಿ ವ್ಯಾಪಿಸುತ ವಿಶ್ವಾತ್ಮನರಿವಾಗು
ಹೃದಯವೇ ಹರಿಯುವುದು ನಿನ್ನ ಕಡೆಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ