ಭಾನುವಾರ, ಜೂನ್ 2, 2013

ಬಾ ಗೆಳೆಯ! ಮಲೆನಾಡಿಗೆ



ಮಲೆನಾಡ ಅಡವಿಯಲಿ ನಡೆಯೋಣ ಬಾ ಗೆಳೆಯ!
ಅರಳುವುದು ಮನವೆಲ್ಲ ಹೂವಿನಂತೆ.
ಹಸಿರೆಲೆಯ ಬನಸೊಬಗು ಎದೆಯಲ್ಲಿ ನಾಟುವುದು
ಚಿಗುರುವುದು ಹೊಸಭಾವ ಚೈತ್ರದಂತೆ.

ಕಾಲಡಿಗೆ ಹಾಸಿರಲು ತರಗೆಲೆಗಳಾ ರಾಶಿ
ತಂಪಾಗುವುದು ತನುವು ಮುಡಿಯವರೆಗೆ.
ಸುಡುಬಿಸಿಲ ತಡೆಗಾಗಿ ಹಸಿರೆಲೆಯ ಕೊಡೆಯಿರಲು
ಬಲುಹಿತವು ಕಾಲ್ನಡಿಗೆ ಅಡವಿಯೊಳಗೆ.

ಮಂಜೆಲ್ಲ ಮುತ್ತಾಗಿ ಬಲೆಗಳಲಿ ಪೋಣಿಸುತ
ಸ್ವಾಗತವ ಕೋರುತಿರೆ ಅತಿಥಿಗಳಿಗೆ.
ಇಬ್ಬನಿಯು ತೊಟ್ಟಿಕ್ಕಿ ತರಗೆಲೆಗೆ ತಂಪಿಟ್ಟ
ಹಾದಿಯಲಿ ನಡೆಯೋಣ ಕಾಡಿನೊಳಗೆ.

ಕಬ್ಬಿಗನ ಕವಿತೆಯಲಿ ರಸಭಾವವಿರುವಂತೆ
ಅಲ್ಲಲ್ಲಿ ಜೇನುಂಟು ಬಾ ಅಡವಿಗೆ.
ಕಾಡಿನಾ ಹಣ್ಣುಗಳ ಸವಿಯೂಟ ಕಾದಿರಲು
ತಡವೇಕೆ ಬಾ ಗೆಳೆಯ! ಮಲೆನಾಡಿಗೆ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ