ಶನಿವಾರ, ಜೂನ್ 8, 2013

ನೀರನೆಳೆವಳ ಹೆಸರು ಗೊತ್ತೆ!?ಬಾನ ಹೊಸಿಲನು ದಾಟಿ
ಬಂದವಳು ಯಾರವಳು?
ಮಂಗಳಾಂಗನೆಯವಳ
ಹೆಸರ ಹೇಳು.

ನೀರ ಬಿಂದಿಗೆ ಹೊತ್ತು
ನೀರೆ ಬರುವಳು ಎಂದು
ಕಾತರದಿ ಕಾದಿರುವೆ,
ಗೊತ್ತೆ ಅವಳು?

ಕಡಲ ನೀರನು ಸೇದಿ
ಮುಗಿಲ ತೊಟ್ಟಿಯ ತುಂಬಿ
ಬುವಿಯನೆಲ್ಲವ ತೊಳೆವ
ಮಾತೆ ಯಾರು?

ಯಾವ ಹಗ್ಗವ ಬಳಸಿ
ನೀರನೆಳೆವಳು ಅವಳು
ತಿಳಿದಿದೆಯೆ ಹೇಳೆನಗೆ,
ಅದರ ಬೇರು?

ಎತ್ತರಕೆ ಜಲವೆಳೆದ
ತೋಳ್ಬಲಕೆ ಶರಣೆಂಬೆ
ಗೊತ್ತಿಲ್ಲ ಅವಳಾರು,
ಯಾವ ತವರು.

ಹತ್ತು ಊರನು ಸುತ್ತಿ
ಕೇಳಿಹೆನು ಯಾರೆಂದು
ಉತ್ತರಿಪ ನರರಿಲ್ಲ
ಸುತ್ತ ಯಾರೂ.

1 ಕಾಮೆಂಟ್‌:

  1. ನೀರನೆಳೆವಳ ನಾಮವದನೇಕೆ ಅರಸಲಿ ನಾ
    ನೀರಸುರಿದೀ ಇಳೆಗೆ ಹಸಿರುಡೆಗೆಯ ತೊಡಿಸಿ
    ಹರುಷವನು ತರುವವಳ ವರ್ಷವೆಂದರುಹಿದರೆ ಸಾಕೇ?

    ಪ್ರತ್ಯುತ್ತರಅಳಿಸಿ