ತಿಳಿನಗೆಯ
ಮೊಗ್ಗೊಂದು ಅರಳಿರಲು ಮೊಗದಲ್ಲಿ
ಜೇನ ಹೀರಿದೆ
ಮನವು ದುಂಬಿಯಾಗಿ.
ಸಿಹಿಯ
ಮತ್ತಿನ ವ್ಯಸನ ನಿತ್ಯವಾಗಲು ಮನಕೆ
ಗಮನಿಸುತಿದೆ
ಮೊಗವನ್ನು ನಗುವಿಗಾಗಿ.
ಮೊಗವರಳಿ
ಹೂವಾಗೆ ಮನವು ಹಾರಿದೆ ಅಲ್ಲಿ
ಹೀರುವಾತುರ
ಸಿಹಿಯ ಮತ್ತಿಗಾಗಿ.
ತನ್ನೆಲ್ಲ
ಗಮನವನು ತುಟಿಯಂಚಿನಲೆ ಇರಿಸಿ
ಜಗವ ಮರೆತಿದೆ
ಮನವು ನಗುವಿಗಾಗಿ.
ನಗುವನ್ನೆ
ಧ್ಯಾನಿಸುತ ತನ್ನನ್ನೆ ತಾನ್ ಮರೆತು
ಜಗವೆಲ್ಲ
ಅಲೆಯುತಿದೆ ವ್ಯಸನಿಯಾಗಿ.
ನಗುವಿನಾ
ಧಾರಣವು ನಿತ್ಯವಾಗಲು ಮನಕೆ
ನಕ್ಕಿತದು
ತನ್ನೊಳಗೆ ಮೌನವಾಗಿ.
ಬಹಳ ಸೊಗಸಾಗಿ ಮನಕಾನಂದವನ್ನೀವ ಸಾಲುಗಳಿವು
ಪ್ರತ್ಯುತ್ತರಅಳಿಸಿ