ಭಾನುವಾರ, ಜೂನ್ 9, 2013

ಪದವಿರಿಸಿ ನಾಲಿಗೆಗೆ ಬಾರಮ್ಮ ಸರಸತಿಯೆ!



ಪದವಿರಿಸಿ ನಾಲಿಗೆಗೆ ಬಾರಮ್ಮ ಸರಸತಿಯೆ!
ಮೆದುಮಾಡಿ ಪದಗಳನು ಮೊಳಕೆಯೊಡೆಸು.
ಮಧುರ ರಸದಲಿ ಅದ್ದಿ ಅಣಿಗೊಳಿಸು ನಾಲಿಗೆಯ
ಹದಗೊಳಿಸಿ ನುಡಿಗಳನು ಒಪ್ಪಗೊಳಿಸು.

ಮಗುವಿನಾ ಮುಗ್ದತೆಯ ಭಾವವನು ತುಂಬುತಲಿ
ಸೊಗವಿಕ್ಕಿ ಮುದಗೊಳಿಸಿ ಮೊಗವರಳಿಸು.
ಮುಗುಳರಳಿ ಫಲಬಿಟ್ಟು ತನ್ನ ತಾ ಕಳೆವಂತೆ
ಮೊಗಬಿರಿದ ಮಾತುಗಳ ಸಫಲಗೊಳಿಸು.

ಹೊಸಚಿಗುರ ಕುಡಿಯಂತೆ ಚಿಗಿಯುತಲಿ ಮೇಲ್ಬರಲಿ
ರಸನದಲಿ ಮಾತೊಂದು ಹೃದ್ಯವಾಗಿ.
ಹೊಸಮಾತು ಸವಿತುಂಬಿ ಹದವರಿತು ರಸಬೆರೆತು
ಕಸುವಿನಲಿ ಹೊರಬರಲಿ ಪದ್ಯವಾಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ