ಶುಕ್ರವಾರ, ಜೂನ್ 28, 2013

ನುಡಿ ಸಂಕೀರ್ತನ



ಕರುನಾಡಿನ ಸಂಕೀರ್ತನ
ಕನ್ನಡನುಡಿಚರಣ.
ಸ್ವರದಿಂಚರಸಂಚಾರಕೆ
ಮೆದುವಾಗಿದೆ ಕರಣ.

ಸಂಗೀತದ ಸಂಸ್ಪರ್ಶಕೆ
ಸಂಮೋಹಿತ ಕವನ.
ಬನಿಗೂಡಿದ ದನಿಯಮಲಿಗೆ
ತನುಮನಸಂಚಲನ.

ನುಡಿದೇವಿಯ ಸಂಕರ್ಷಣ
ಸಂಸ್ಕಾರದ ಸ್ಮರಣ.
ನುಡಿಗಟ್ಟಿನ ರುಚಿಕಟ್ಟಿಗೆ
ನಲಿದಾಡಿದೆ ರಸನ.

ಬುಧವಾರ, ಜೂನ್ 26, 2013

ಸದ್ದು ಮಾಡುವ ವಿದ್ಯೆ – ಹೊದ್ದು ಮಲಗಿದ ಬುದ್ಧಿ- ಸಿದ್ಧಮಂತ್ರದ ಗುದ್ದು



ಶ್ರದ್ಧೆಯಿಲ್ಲದೆ ಕಲಿತ 
ಸದ್ದು ಮಾಡುವ ವಿದ್ಯೆ
ಕದ್ದು ತುಂಬಿದ ಹೊನ್ನ ಕುಡಿಕೆಯಂತೆ.
ನಿದ್ದೆಯಿಂದಲಿ ಎದ್ದು 
ಬುದ್ಧನಾದೆನು ಎಂದು
ಗದ್ದಲದ ಸಂತೆಯಲಿ ಸಾರಿದಂತೆ.

ಹೊದ್ದು ಮಲಗಿದ ಬುದ್ಧಿ 
ಬಿದ್ದ ಕನಸನೆ ಮಾರಿ
ಸಿದ್ಧಖಾದ್ಯವ ತಾನು ಕೊಂಡಿತಂತೆ.
ಗದ್ದುಗೆಯ ಏರಿದವ
ಮದ್ಯವನು ತಾ ಕುಡಿಸಿ
ಬಿದ್ದವಗೆ ಅನ್ನವನು ಕೊಟ್ಟನಂತೆ.

ಸಿದ್ಧಮಂತ್ರವ ಪಠಿಸಿ
ವಿದ್ಯೆ ಕಲಿವೆನು ಎಂದು
ಗುದ್ದಿ ಗೆಲ್ಲುವುದೆಲ್ಲ ಹಗಲುಗನಸು.
ಸಾಧನೆಯು ಇಲ್ಲದೆಯೆ
ಸಿದ್ಧಿಸದು ನಮಗೆಂದೂ
ಮುದ್ದುಮಗುವಿನ ಶುದ್ಧ ಮುಗ್ಧಮನಸು.






ಶನಿವಾರ, ಜೂನ್ 22, 2013

ಭಾವಗಳಿಗೇಕಿಲ್ಲ ಸಹಜತೆಯ ಗಾನ?



ಗಿರಿಗಳಲಿ ವನಗಳಲಿ ಹೊನಲುಗಳ ಬಳುಕಿನಲಿ
ಮರಗಳಲಿ ಹೂಗಳಲಿ ಹಸಿರೆಲೆಯ ತಂಪಿನಲಿ
ಹಗಲಿನಲಿ ಸಂಜೆಯಲಿ ಮುಂಜಾವ ಮಂಜಿನಲಿ
ಸಹಜದಾ ಲಯವಡಗಿ ಹೊರಟಿರಲು ಗಾನ
ಭಾವಗಳಿಗೇಕಿಲ್ಲ ಸಹಜತೆಯ ಯಾನ?

ಕಾಗೆಗಳ ಕೂಗಿನಲಿ ಕುಕಿಲಗಳ ಕೊರಳಿನಲಿ
ಹಲ್ಲಿಗಳ ನುಡಿಗಳಲಿ ಗೂಳಿಗಳ ಗುಟುರಿನಲಿ
ನೀರ್ಗರೆವ ಮೋಡದಲಿ ಭೋರ್ಗರೆವ ಕಡಲಿನಲಿ
ಸಹಜದಾ ಲಯವಡಗಿ ಹೊರಟಿರಲು ಗಾನ
ಭಾವಗಳಿಗೇಕಿಲ್ಲ ಸಹಜತೆಯ ಯಾನ?

ಕಣಕಣದಿ ಜೀವರಸ ಹರಿಬಿಡುವ ನಾಡಿಗಳು
ಉಸಿರಿನಲಿ ತಾ ಬೆರೆತು ಸಹಗೀತೆ ಹಾಡಿರಲು
ಅಂಗಾಂಗಸಂಗಗಳು ಲಯವಿಟ್ಟು ಕುಣಿದಿರಲು
ಭಾವಗಳಿಗೇಕಿಲ್ಲ ಸಹಜತೆಯ ಗಾನ?
ಸಹಜದಾ ಗತಿಯಿರಲು ಪ್ರಕೃತಿಯಾ ಯಾನ.






ಬಾರೆ ಭಾಮತಿ! ಎನ್ನ ಮತಿಯೊಳು



ದೇವಿ ಭಾರತಿ! ಜ್ಞಾನ ಮೂರುತಿ!
ವರವ ಕರುಣಿಸು ತ್ವರಿತದಿ.
ಭಾವಪೂರಿತ ಕಾವ್ಯಕಾರಣ
ಪದಗಳಿರಿಸುತ ರಸನದಿ.

ಬಾರೆ ಭಾಮತಿ! ಎನ್ನ ಮತಿಯೊಳು
ಬೆಳಕ ಚೆಲ್ಲುತ ಕರುಣದಿ.
ವಿಶ್ವಮಾನವಸಾರಧಾರಣ
ಪ್ರೇಮವರಳಲಿ ಹೃದಯದಿ.

ಸತ್ಯ ಪಥದಲಿ ಅರ್ಥ ಮಥಿಸುತ
ಮಾತು ತೂಕವ ತಳೆಯಲಿ.
ನಿತ್ಯವಾಗಲಿ ತತ್ತ್ವಶೋಧನ
ಪಥ್ಯವಾಗುತ ಫಲಿಸಲಿ.