ಬುಧವಾರ, ಜುಲೈ 31, 2013

ಬಾಗಿ ಬಾ ಎನ್ನೆದೆಗೆ ಬಳುಕಿನಾ ಭಾವಲತೆ!



ಬಾಗಿ ಬಾ ಎನ್ನೆದೆಗೆ ಬಳುಕಿನಾ ಭಾವಲತೆ! 
ಉಗುರು ಸೋಂಕದ ಚಿಗುರ ಕವಿತೆ ಹೊತ್ತು.
ಮುಗಿಲು ಕಣ್ಣಿನ ಹುಬ್ಬ ಕೊಂಕಿಸುತ ನೋಡುತಿರೆ
ಚಿಗರೆಯೋಟದ ನಿನ್ನ ಚುರುಕು ಗತಿಯ.

ಸಗ್ಗದಾ ಸೊಗವೆಲ್ಲ ಒಗ್ಗೂಡಿ ಓಡೋಡಿ
ಮೊಗ್ಗೊಳಗೆ ಅಣುವಾಗಿ ಬೆರೆತು ಬರಲಿ.
ಹಿಗ್ಗಿ ಅರಳುತ ಮನಸು ತೇಲಾಡಿ ಹಗುರಾಗಿ
ಮೊಗದಲ್ಲಿ ಹೂ ನಗೆಯು ಮಾಗಿ ಬರಲಿ.

ಮೊದಲ ನಡಿಗೆಯ ನಡೆದು ಚೆಲುವಿನಲಿ ಚೆಲ್ಲಾಡಿ
ಮೆದುವಾದ ಚರಣದಲಿ ಎದೆಗೊದೆಯಲಿ.
ಪದದ ಒದೆತಕೆ ಸ್ವರವು ಪಲ್ಲವಿಸಿ ಮೈದುಂಬಿ
ಹೃದಯಮಧ್ಯದಿ ಕವಿತೆ ಬಿರಿದು ನಿಲಲಿ.

ಸೋಮವಾರ, ಜುಲೈ 29, 2013

ಕತ್ತಲ ಸೊಬಗು



ಬಣ್ಣಿಸಲಸದಳ ಕೋಮಲ ತನುವಿನ
ಕೃಷ್ಣಾಂಬರಧರ ಸುಂದರಿಯ.
ತಾರಾಸುಮಗಳ ಮುಡಿಯಲಿ ಧರಿಸಿಹ
ಕೇಶಾಲಂಕೃತ ಅಂಗನೆಯ.

ನೀಲಿ ಸೆರಗಿನಾ ಅರೆತೆರೆಮರೆಯಲಿ
ಭೂಮ್ಯಾಕಾಶವ ತಬ್ಬಿಹಳು.
ತಿಂಗಳ ಬೆಳಕಿನ ಹಾಲನು ತುಂಬಿಹ
ಬೆಳ್ಳಿಯ ಬಟ್ಟಲ ಪಿಡಿದಿಹಳು.

ವಿಶ್ವದ ಎಲ್ಲಾ ಸೊಬಗನು ಅರೆಯುತ
ಸವಿಯ ರಸಾಯನ ಬೆರೆಸಿಹಳು.
ಪಡುವಣ ಕೆಂಪಿನ ಮಬ್ಬಿನ ಬೆಳಕಲಿ
ಪಾತ್ರೆಗೆ ಮಧುವನು ಸುರಿದಿಹಳು.

ನಿದಿರಾಮದಿರೆಯ ಮತ್ತಲಿ ತೇಲಿಸಿ
ಬಾಳಿನ ಚಿಂತೆಯ ಮರೆಸಿಹಳು.
ಮಲ್ಲಿಗೆ ತೂಕಕೆ ಮನಸನು ಕರಗಿಸಿ
ಕನಸಿನ ಲೋಕಕೆ ಕರೆದಿಹಳು.
               
ರಜನಿಯ ಚೆಲುವಿನ ಕಾಂತಿಯ ಸೆಳೆತಕೆ
ಮೂಡಿದ ದಿನಕರ ಪೂರ್ವದಲಿ.
ಕಣ್ಣನು ತಪ್ಪಿಸಿ ಓಡಿದ ಬೆಡಗಿಯ
ಹಿಡಿಯಲು ಮುಳುಗಿದ ಕಡಲಿನಲಿ.

ಶನಿವಾರ, ಜುಲೈ 27, 2013

ಹೊಸಗವಿತೆಯೊಂದು ಬರಲಿ ಎದೆಗೆ



ಕಾದಿರುವೆ ನಾನಿಂದು ಬಾಗಿಲಿನ ಕದತೆರೆದು
ಮಧುರ ಭಾವವು ಬಳುಕಿ ಬಾಗಲೆಂದು.
ಹೃದಯ ಮಿಡಿತದ ಗತಿಗೆ ಕುಣಿಕುಣಿದು ನಲಿದಾಡಿ
ಮುದ್ದಾದ ಪದವೊಂದು ನುಸುಳಲೆಂದು.

ಹಳೆಯ ನೆನಪಿನ ಸುರುಳಿ ಚಿತ್ತದಲಿ ತಾ ಬಿಚ್ಚಿ
ಸುಳಿವು ನೀಡಿದೆ ಒಳಗೆ ಬರುವೆನೆಂದು.
ಮಳೆಯ ಹನಿಗಳು ಸುರಿದು ಇಳೆಯಾಳಕಿಳಿವಂತೆ
ಗಳದೊಳುದುರಿವೆ ಸ್ಮೃತಿಯ ಹನಿಗಳಿಂದು.

ಉಸಿರ ಕಣದಲಿ ಬೆರೆತು ರಸವಾಗಿ ಜಿನುಜಿನುಗಿ
ಸೋಸಿ ನಿಲ್ಲುತ ಸ್ವರವು ಬಾಗಿ ಬರಲಿ.
ಬಸಿರಿನಲಿ ಅಣು ಮೊಳೆತು ತಾ ಜೀವ ತಳೆವಂತೆ
'ಹೊಸಗವಿತೆಕೂಸಾಗಿ ಎದೆಗೆ ಬರಲಿ.

 
http://gulfkannadiga.com/news/culture/99533.html

ಬುಧವಾರ, ಜುಲೈ 24, 2013

ಗಣಪತಿಯ ಭೂಲೋಕ ಯಾತ್ರೆ



ಭೂಸಂಚಾರಕೆ ಅನುಮತಿ ಬೇಡಿದ
ಬಾಲಗಣಪತಿಯು ಶಿವನಲ್ಲಿ.
ಭೂಮಿಗೆ ಎಂದೂ ಹೋಗದಿರೆಂದನು
ತನ್ನಯ ಮಗನಿಗೆ ಪರಶಿವನು.

ಹಟವನು ಎಂದೂ ಬಿಡದಿಹ ಗಣಪತಿ
ತಾಯಿಯ ಅನುಮತಿ ಗಿಟ್ಟಿಸಿದ.
ಇಲಿಯನು ಏರುತ ಭಾರತ ಭೂಮಿಯ
ನಗರದ ಬೀದಿಗೆ ಬಂದಿಳಿದ.

ದೇವರ ವಿಗ್ರಹದಂಗಡಿ ನೋಡುತ
ಶಿವನಾ ಬೆಲೆಯದು ಎಷ್ಟೆಂದ.
“ಸಾವಿರ ರೂಗಳು”  ಬೇಕೇ ಎನ್ನುತ
ಅಂಗಡಿ ಮಾಲಿಕ ಹೊರಬಂದ.

‘ತಂದೆಯ ಬೆಲೆಯದು ಕುಸಿದಿರಬಹುದು
ತಾಯಿಯ ಬೆಲೆ ಹೆಚ್ಚಿರಬಹುದು’
ಮನದಲಿ ಯೋಚಿಸಿ ಗಣಪತಿ ಕೇಳಿದ
ಪಾರ್ವತಿ ಬೆಲೆಯದು ಎಷ್ಟೆಂದು.

ಪಾರ್ವತಿ ವಿಗ್ರಹ ಇನ್ನೂ ಕಡಿಮೆ
ಐನೂರು ರೂಗಳ ಕೊಡಿರೆಂದ.
ತಾಯಿಯ ಬೆಲೆಯಾ ಕುಸಿತವ ಕಂಡು
ಬೇಸರವಾಯಿತು ಒಂದುಕ್ಷಣ.

ತನ್ನಯ ವಿಗ್ರಹ ಅಲ್ಲೇ ನೋಡುತ
ಹಿರಿಹಿರಿಹಿಗ್ಗಿದ ಗಣಪತಿಯು.
ಮಣ್ಣಲಿ ಮಾಡಿದ ಸುಂದರಮೂರ್ತಿಯ
ಬೆಲೆಯನು ಕೇಳಿದ ಸಡಗರದಿ.

“ಈಶ್ವರಪಾರ್ವತಿ ಎರಡೂ ಕೊಂಡರೆ
ಗಣಪತಿ ವಿಗ್ರಹ ಪುಕ್ಕಟೆಯು”
ಕುಸಿದನು ಗಣಪತಿ ಬೆಲೆಯನು ತಿಳಿದು
ತಟ್ಟನೆ ಇಲಿಯನು ಏರಿದನು.

ಭೂವ್ಯವಹಾರವು ಬೇಡವೆ ಬೇಡ
ತನಗಿಲ್ಲೇನೂ ಬೆಲೆಯಿಲ್ಲ.
ಭೂಮಿಗೆ ಎಂದೂ ಬಾರೆನು ಎನ್ನುತ
ಕೈಲಾಸಗಿರಿಗೆ ಮರಳಿದನು.




ಸೋಮವಾರ, ಜುಲೈ 22, 2013

ಎಲ್ಲಾ ಮಾಯ!



ಘಟನೆಗಳು ನಡೆಯುತಿವೆ ಕಣ್ಣುಗಳು ನೋಡುತಿವೆ
ಮನದಲ್ಲಿ ಮೂಡುತಿದೆ -ಸತ್ಯವೆಂದು.
ಮನದ ಸೃಷ್ಟಿಯ ಹಿಂದೆ ಅಡಗಿರುವ ಚೇತನದಿ
ನೆಲೆಯಾಗೆ ತಿಳಿಯುವುದು ಮಿಥ್ಯವೆಂದು.

ಅಲೆರಹಿತ ಮನವಿರಲು ಘಟನೆಗಳ ಅರಿವಿಲ್ಲ;
ಭಾಸವಾಗುವುದದೆಮಗೆ ಅಲೆಗಳಿರಲು.
ಅಲೆಯೇರಿಳಿತಗತಿಯ ತೀರ್ಮಾನವಿರಲಲ್ಲಿ
ಸಾಪೇಕ್ಷವಾಗಿಹುದು- ಭ್ರಮೆಯೆ ಎಲ್ಲ.

ಕಣವೆಲ್ಲ ಅಣುವಾಗಿ ಪರಮಾಣುವಾಗಿಹವು
ಕೊನೆಗೊಂದೆ ಉಳಿದಿಹುದು- 'ಚಲನೆ' ಅಲ್ಲಿ
ಚಲನಕಾರಣಮೂಲವರಿತಾಗ ಅನುಭವದಿ
ವಸ್ತು-ಘಟನೆಯ ಮೂಲವಿರುವುದಲ್ಲಿ.

ಮನದ ಕಣಕಣಗಳನು ಕಳೆದುಳಿದ ಅರಿವಿನಲಿ
ನೆಲೆಯಾಗಿ ನೋಡುತಿರೆ ಘಟನೆಗಳು ಮಾಯ.
ನೋಡುವಾ ವಸ್ತುವಲಿ ನೋಡುಗನು ಒಂದಾಗೆ
ನೋಟವಿಲ್ಲವು ಅಲ್ಲಿ -ಎಲ್ಲವೂ ಮಾಯ.