ಬಣ್ಣಿಸಲಸದಳ
ಕೋಮಲ ತನುವಿನ
ಕೃಷ್ಣಾಂಬರಧರ
ಸುಂದರಿಯ.
ತಾರಾಸುಮಗಳ
ಮುಡಿಯಲಿ ಧರಿಸಿಹ
ಕೇಶಾಲಂಕೃತ
ಅಂಗನೆಯ.
ನೀಲಿ ಸೆರಗಿನಾ ಅರೆತೆರೆಮರೆಯಲಿ
ಭೂಮ್ಯಾಕಾಶವ
ತಬ್ಬಿಹಳು.
ತಿಂಗಳ ಬೆಳಕಿನ ಹಾಲನು ತುಂಬಿಹ
ಬೆಳ್ಳಿಯ
ಬಟ್ಟಲ ಪಿಡಿದಿಹಳು.
ವಿಶ್ವದ
ಎಲ್ಲಾ ಸೊಬಗನು ಅರೆಯುತ
ಸವಿಯ ರಸಾಯನ ಬೆರೆಸಿಹಳು.
ಪಡುವಣ ಕೆಂಪಿನ ಮಬ್ಬಿನ ಬೆಳಕಲಿ
ಪಾತ್ರೆಗೆ
ಮಧುವನು ಸುರಿದಿಹಳು.
ನಿದಿರಾಮದಿರೆಯ
ಮತ್ತಲಿ ತೇಲಿಸಿ
ಬಾಳಿನ ಚಿಂತೆಯ ಮರೆಸಿಹಳು.
ಮಲ್ಲಿಗೆ
ತೂಕಕೆ ಮನಸನು ಕರಗಿಸಿ
ಕನಸಿನ ಲೋಕಕೆ ಕರೆದಿಹಳು.
ರಜನಿಯ ಚೆಲುವಿನ ಕಾಂತಿಯ ಸೆಳೆತಕೆ
ಮೂಡಿದ ದಿನಕರ ಪೂರ್ವದಲಿ.
ಕಣ್ಣನು
ತಪ್ಪಿಸಿ ಓಡಿದ ಬೆಡಗಿಯ
ಹಿಡಿಯಲು
ಮುಳುಗಿದ ಕಡಲಿನಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ