ಮಂಗಳವಾರ, ಜುಲೈ 9, 2013

ಅರ್ಥಶಾಸ್ತ್ರಬನ್ನಿ ಶಿಷ್ಯರೇ! ತರಗತಿಯೊಳಗೆ
ಪಾಠವ ಕೇಳಿರಿ ನೀವೆಲ್ಲ.
ಹಾಜರಿಯೊಂದೇ ಸಾಲದು ನಿಮಗೆ
ಅದುವೇ ಕಲಿಕೆಯ ಕುರುಹಲ್ಲ.

ಅರ್ಥಶಾಸ್ತ್ರವ ಬೋಧನೆ ಮಾಡುವೆ
ಗಮನವ ಹರಿಸಿರಿ ಇತ್ತಕಡೆ.
ಅರ್ಥತತ್ತ್ವದ ಅರ್ಥವನರಿಯಲು
ಹೋಗದು ಮನಸು ಸ್ವಾರ್ಥದೆಡೆ.

ಕೇಳುವ ಕಿವಿಯು ದುಡಿಯುವುದಿಲ್ಲ
ದುಡಿಯುವ ಬೆವರಿಗೆ ಕಿವಿಯಿಲ್ಲ.
ಶ್ರದ್ಧೆಯ ಶ್ರಮವೇ ಫ್ರತಿಫಲ ಕೊಡುವುದು
ಬುದ್ದಿಯ ಕುಶಲತೆ ಬೇಕೇ ಇಲ್ಲ.

ಬಿಲ್ಲನು ಹಿಡಿಯಲು ಅರಿತರೆ ತಾನೆ
ಬಾಣವು ಗಮ್ಯವ ತಲುಪುವುದು.
ತನುಮನ ಬಗ್ಗಿಸಿ ಗುರಿಯನು ಇಟ್ಟೊಡೆ
ಫಲಿತವು ತಾನೇ ಲಭಿಸುವುದು.

ಎಲ್ಲಾ ಪ್ರಶ್ನೆಗಳಿಗುತ್ತರ ಬರೆದು
ಸಾರ್ಥಕವಾಯಿತು ಎನ್ನದಿರಿ.
ಅರ್ಥದ ಅರಿವಿನ ಆಳವ ಸ್ಪರ್ಶಿಸಿ
ಬದುಕಿನ ಪ್ರಶ್ನೆಗೆ ಉತ್ತರಿಸಿ.
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ