ಬಾಗಿ ಬಾ ಎನ್ನೆದೆಗೆ
ಬಳುಕಿನಾ ಭಾವಲತೆ!
ಉಗುರು ಸೋಂಕದ ಚಿಗುರ
ಕವಿತೆ ಹೊತ್ತು.
ಮುಗಿಲು ಕಣ್ಣಿನ
ಹುಬ್ಬ ಕೊಂಕಿಸುತ ನೋಡುತಿರೆ
ಚಿಗರೆಯೋಟದ ನಿನ್ನ
ಚುರುಕು ಗತಿಯ.
ಸಗ್ಗದಾ ಸೊಗವೆಲ್ಲ
ಒಗ್ಗೂಡಿ ಓಡೋಡಿ
ಮೊಗ್ಗೊಳಗೆ ಅಣುವಾಗಿ
ಬೆರೆತು ಬರಲಿ.
ಹಿಗ್ಗಿ ಅರಳುತ ಮನಸು
ತೇಲಾಡಿ ಹಗುರಾಗಿ
ಮೊಗದಲ್ಲಿ ಹೂ ನಗೆಯು
ಮಾಗಿ ಬರಲಿ.
ಮೊದಲ ನಡಿಗೆಯ ನಡೆದು
ಚೆಲುವಿನಲಿ ಚೆಲ್ಲಾಡಿ
ಮೆದುವಾದ ಚರಣದಲಿ
ಎದೆಗೊದೆಯಲಿ.
ಪದದ ಒದೆತಕೆ ಸ್ವರವು
ಪಲ್ಲವಿಸಿ ಮೈದುಂಬಿ
ಹೃದಯಮಧ್ಯದಿ ಕವಿತೆ
ಬಿರಿದು ನಿಲಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ