ಭಾನುವಾರ, ಮಾರ್ಚ್ 31, 2013

ಟೊಳ್ಳು ಗಟ್ಟಿ!



ಟೊಳ್ಳು ಹೊಟ್ಟೆಯು ಗಟ್ಟಿರೊಟ್ಟಿಯ
ರುಬ್ಬಿ ರಸವನು ತೆಗೆವುದು.
ಡೊಳ್ಳು ಹೊಟ್ಟೆಯು ರುಬ್ಬಲಾಗದೆ
ವಾಯು ಅಬ್ಬರ ಮೆರೆವುದು.

ಟೊಳ್ಳು ಹೊಟ್ಟೆಯ ಹೊತ್ತ ಬಡವನು
ಬೆವರು ಸುರಿಸಿ ದುಡಿವನು.
ಡೊಳ್ಳು ಹೊಟ್ಟೆಯ ಹೊತ್ತ ಧನಿಕನು
ಬೆವರ ಸುರಿಸದೆ ದಣಿವನು.

ಟೊಳ್ಳ ಬೆಂಬಲ ಇಲ್ಲದಿದ್ದರೆ
ಡೊಳ್ಳ ರಾಜ್ಯವನಾಳ್ವನೇ!?
ಪೊಳ್ಳು ಭರವಸೆ ಪಡೆದ ಟೊಳ್ಳನು
ಜೊಳ್ಳು ಧಾನ್ಯವ ಬೆಳೆವನೇ!?

ಮೈಯ ಬೆವರಿಸಿ ಧಾನ್ಯವೊಕ್ಕಿದ
ರಟ್ಟೆಗೆಲ್ಲಿದೆ ನ್ಯಾಯವು?
ಡೊಳ್ಳು ತಕ್ಕಡಿ ಎಲ್ಲ ತೂಗಲು
ಟೊಳ್ಳಗೆಲ್ಲಿದೆ ತೂಕವು?




ಶುಕ್ರವಾರ, ಮಾರ್ಚ್ 29, 2013

ಫಲಾಪೇಕ್ಷೆಯಿಲ್ಲದೆ ಮತನೀಡಿ!



ಮತದಾರ ಬಂಧುಗಳೆ!  ಕಾರುಣ್ಯಸಿಂಧುಗಳೆ!
ಚುನಾವಣೆಯ ಕಣದಲಿ ನಿಂತಿರುವೆನು.
ದೀನದಲಿತರ ಬಂಧು ಸಾಧುಸಂತರ ಸಿಂಧು
ಎಂಬೆಲ್ಲ ಹೆಸರನ್ನು ಗಳಿಸಿರುವೆನು.

ಪಾನಮತ್ತರ ದಂಡು ಪೀನ ಉದರದ ಹಿಂಡು
ನನ್ನನ್ನೆ ಕಣದಲ್ಲಿ ಉಳಿಸಿರುವುದು.
ಕನಕಲಕ್ಷ್ಮಿಯ ಕರೆದು ಮನಕೆ ಸಂತಸಯೆರೆವ
ಮತಾರ್ಥಿ ನಾನೆಂದು ತಿಳಿದಿರುವುದು.

ಘನವಾದ ಮತವೊಂದು ನನಗಾಗಿ ನೀವೊತ್ತಿ
ಮನೆಯೊಂದ ನಿಮಗಾಗಿ ನಾ ಕೊಡುವೆನು.
ಪಡಿತರದ ಬದಲಾಗಿ ಪಡಿತಮವ ನೀಡುವೆನು
ಕೊಡಿರಯ್ಯ ಕೃಪೆ ತೋರಿ ಮತವೊಂದನು.

ಗೆಲುಮೊಗದ ಅಭ್ಯರ್ಥಿ ಕಣದಲ್ಲಿ ನಾನಿರಲು
ಸೋಲೆಲ್ಲ ಉಳಿದವರ ಕಟ್ಟಿಟ್ಟಬುತ್ತಿ.
ಸೌಧದೊಳಗೆನ್ನನ್ನು ಕುಳ್ಳಿರಿಸಿ ನೋಡೋಣ
ನಿಮ್ಮಗೆಲ್ಲ ನಾ ಕೊಡುವೆ ದಿನದಬುತ್ತಿ.

ಮತದಾನವೆಂಬುದದು ದಾನದಲೆ ಉತ್ತಮವು
ಫಲವನ್ನು ಬದಿಗೊತ್ತಿ ಮತಹಾಕಿರಿ.
ನಿಮ್ಮೆಲ್ಲ ಪಾಪವನು ಮತದಾನ ರೂಪದಲಿ
ಕೃಪೆಮಾಡಿ ನನಗಿತ್ತು  ಹಗುರಾಗಿರಿ.


ಗುರುವಾರ, ಮಾರ್ಚ್ 28, 2013

ಮೂರ್ಖಗೀತೆ!



ಮೂರ್ಖರ ಪೆಟ್ಟಿಗೆಯೊಳಗಿನ  ದನಿಯಿದು
ಗಮನಿಸಿ! ಕೇಳಿರಿ!  ನೀವೆಲ್ಲ.
ನಮ್ಮಯ ಕಾರ್ಯಕ್ರಮಗಳ ನೋಡಿರಿ
ತಪ್ಪದೆ ಮೂರ್ಖರೆ! ದಿನವೆಲ್ಲ.   

ಬೆಳಗಿನ ಜಾವದಿ ಭವಿಷ್ಯ ನುಡಿವೆವು
ನಿಮ್ಮಯ ತೊಂದರೆ ನೀಗುವೆವು.
ಕೆಲಸವ ಮಾಡಲು ಸಮಯವು ಬೇಕೇ!?
ಜಾಹೀರಾತನು ಹಾಕುವೆವು.

ಹೆಂಗಳೆಯರಿರಾ! ಬನ್ನಿರಿ! ಕುಳ್ಳಿರಿ!
ದಿಟ್ಟಿಸಿ ನೋಡಿರಿ ಸೀರೆಗಳ!
ನಿರೂಪಣೆಗೆಂದು ದಿನವೂ ಬರುವೆವು
ಸೀರೆಯ ಜಾಹೀರು ಮಾಡುವೆವು.

ಮಕ್ಕಳ ಶಾಲೆಗೆ ಕಳುಹಿಸಿ ತ್ವರಿತದಿ
ಹೆಮ್ಮೆಯ ಮೂರ್ಖರು ನೀವುಗಳು.
ಗಂಡನ ಕೆಲಸಕೆ ಬೇಗನೆ ಅಟ್ಟಿರಿ
ಧಾರಾವಾಹಿಗಳ ಹಾಕುವೆವು.

ಸವಿರುಚಿ ಮಾಡುವ ವಿಧಾನವನೆಲ್ಲ
ಅನುದಿನ ನಿಮಗೆ ಕಲಿಸುವೆವು.
ನಿಮ್ಮಯ ಹೆಮ್ಮೆಯ ವಸ್ತುವ ಕೊಳ್ಳಿರಿ                    
ಶಾಪಿಂಗ್ ವಿಧಾನ ತಿಳಿಸುವೆವು.

ಅಡಿಗೆಯ ಮಾಡಿಲ್ಲವೆನ್ನದಿರಿ ನೀವು
ತಂಗಳು ಪೆಟ್ಟಿಗೆ ಇದೆಯಲ್ಲ !.
ಮೂರ್ಖರ ಪೆಟ್ಟಿಗೆಯೊಂದಿಗೆ ಹುಟ್ಟಿಹ
ಸೋದರನಂತೆಯೆ ಅದು ಅಲ್ವಾ!

ವಿಧಾನಸೌಧದಿ ನಡೆಯುವ ವಿಷಯದ
ಚರ್ವಿತ ಚರ್ವಣ ಮಾಡುವೆವು.
ಗೋಸುಂಬೆಗಳಾ ಹೊಸಹೊಸ ಬಣ್ಣದ
ಮಿಂಚಿನ ಸುದ್ದಿಯ ನೀಡುವೆವು

ವಿಶ್ವಮಾನವತೆಯ ತತ್ತ್ವವ ಸಾರುವ
ಕ್ರಿಕೆಟ್ಟಾಟವದು ಇದೆಯಿಲ್ಲಿ.
ಮಕ್ಕಳು ಯುವಕರು ಮುದುಕರು ಎನ್ನುವ
ಭೇದವು ಎಲ್ಲಿದೆ ಇದರಲ್ಲಿ?

ಬನ್ನಿರಿ ಮಕ್ಕಳೆ! ಕಾರ್ಟೂನ್ ನೋಡಿರಿ!
ನಿಮ್ಮಯ ಸಮಯವ ಮೀಸಲಿಡಿ.
ಓದಲು ಬರೆಯಲು ಬೇಕಾದಷ್ಟಿದೆ
ಎಂಬಾ ನೆಪವನು ಬದಿಯಲಿಡಿ.

ಬನ್ನಿರಿ ಹಿರಿಯರೆ! ನೋಡಿರಿ ಚಿಂತನ!
ಮುಕ್ತಿಗೆ ಮಾರ್ಗವ ತೋರುವೆವು.
ಜನ್ಮಾಂತರದಾ ವಿಷಯವ ತಿಳಿಸುತ
ನಿಮ್ಮಯ ಕರ್ಮವ ಅಳಿಸುವೆವು.

ಮಕ್ಕಳ ಓದಿಗೆ ಅಡಚಣೆಯೆನ್ನುತ
ಸುಮ್ಮನೆ ತರಲೆಯ ತೆಗೆಯದಿರಿ.
ವಿದ್ಯುದಿಲಾಖೆಯ ಕೃಪೆಯೂ ನಿಮಗಿದೆ
ಎಂಬಾ ವಿಷಯವ ಮರೆಯದಿರಿ.


ಸೋಮವಾರ, ಮಾರ್ಚ್ 25, 2013

ತಿಳಿ-ಸಾರು!




ಮೆಣಸು, ಜೀರಿಗೆ, ಮೆಂತ್ಯ, ಸಾಸಿವೆ
ಧನಿಯಗಳನು ಹುರಿಯಿರಿ.
ಕರಿಯಬೇವಿನ ಎಸಳುಗಳನು
ಸ್ವಲ್ಪ ಬಾಡಿಸಿ ಬೆರೆಸಿರಿ.

ಎಲ್ಲ ಸೇರಿಸಿ ಪುಡಿಯ ಮಾಡುತ
ತೆಂಗಿನೊಂದಿಗೆ ರುಬ್ಬಿರಿ.
ರುಚಿಯ ಹದವನು ಮನದಿ ಯೋಚಿಸಿ
ಉಪ್ಪುಬೆಲ್ಲವ ಬೆರೆಸಿರಿ.

ತೊಗರಿ ಬೇಳೆಯು ಬೆಂದನಂತರ
ಎಲ್ಲ ಸೇರಿಸಿ ಕುದಿಸಿರಿ.
ಹುಣಿಸೆ ಹಣ್ಣನು ಹಿಂಡಿ ಹಾಕುತ
ಕೈಯನೊಮ್ಮೆ ತೊಳೆಯಿರಿ.

ಇಂಗು,ಸಾಸಿವೆ ತುಪ್ಪದೊಂದಿಗೆ
ಒಗ್ಗರಣೆಯನು ಹಾಕಿರಿ.
ಕೊತ್ತಂಬ್ರಿಸೊಪ್ಪ ತರಿದು ಉದುರಿಸಿ
ತಟ್ಟೆಯೊಂದನು ಮುಚ್ಚಿರಿ

ಪಾಕಪುಸ್ತಕ ಓದಿ ಮಾಡಿದ
ತಿಳಿಯ ಸಾರಿದು ಎಚ್ಚರ!
ಅನ್ನದೊಂದಿಗೆ ಬೆರೆಸಿ ತಿನ್ನಿರಿ
ಹಸಿದ ಹೊಟ್ಟೆಗೆ ರುಚಿಕರ.