ಭಾವಗಳ
ಸಿರಿಯಿರಲು ಬಡತನದ ಮಾತೇಕೆ?
ಜಗವಿತ್ತ
ವರವದುವೆ ಬದುಕಿನೊಳಗೆ.
ಕನಸುಗಳ
ಕಣಕಣವು ಕವಿತೆಗಳ ಹನಿಯಂತೆ
ಒಲವಿನಾ
ಗಣಿಯಿರಲು ಹೃದಯದೊಳಗೆ.
ಸಿಹಿಯೊಲವ
ಒಡವೆಯಲಿ ಸಿಂಗರಿಸಿದಾ ಚೆಲುವು
ಹಣ್ಣಂತೆ
ಬಡತನದ ತರುವಿನೊಳಗೆ.
ಸವಿಯಾದ
ಮಾತಿನಲಿ ಹಿತವಾದ ನಡೆಯಿರಲು
ಪುಣ್ಯಗಳ
ಫಲವದುವೆ ಬಾಳಿನೊಳಗೆ.
ಸಿರಿತನವೆ
ಸೊಬಗೆಂದು ಮನತುಂಬ ಬಯಸಿರಲು
ಸಿಗದಿರಲು ಬಲುನೋವು ಹೃದಯದೊಳಗೆ.
ಹುಳಿಮಾವ
ಮಿಡಿಗಾಗಿ ಎಸೆದಿರುವ ಕಲ್ಲುಗಳು
ತಾ ತೂರಿ
ಬಿದ್ದಂತೆ ನೆತ್ತಿಯೊಳಗೆ.
ಭಾವಗಳ
ಸಿರಿಯಲ್ಲಿ ಕನಸುಗಳು ಮೇಳೈಸಿ
ಚಿತ್ತಾರ
ಬಿಡಿಸುತಿವೆ ಬಡವರೊಳಗೆ.
ಕನಸುಗಳೆ
ಕಾಣದಾ ಸಿರಿತನದ ಭಾವಗಳು
ನಲುಗುತಿವೆ
ಚಿಂತೆಗಳ ಸಂತೆಯೊಳಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ