ಮಂಗಳವಾರ, ಮಾರ್ಚ್ 5, 2013

ಕನ್ನಡದೊಲವಿನ ಬಂಧ


ತೊದಲಿನ ನುಡಿಯಲೆ ಮುದವನು ನೀಡಿದೆ
ಕನ್ನಡ ಭಾಷೆಯ ಪದಬಂಧ.
ತಾಯಿಯ ಮಡಿಲಲಿ ಮಮತೆಯ ನೆಲದಲಿ
ಕಂಡೆವು ಜೀವನದಾನಂದ.

ಹೃದಯದಿ ಬರೆದಾ ಕನ್ನಡವೋದುತ
ಅರಿತೆವು ಸಂಸ್ಕೃತಿ-ಸಂಬಂಧ.
ಬೆರೆತಿದೆ ಉಸಿರಿನ ಗತಿಗತಿಯಲ್ಲೂ
ಅಕ್ಷರಮಾಲೆಯ ಹೂಗಂಧ

ಅಕ್ಷರ ಬೀಜವ ಬಿತ್ತುತ ಬೆಳೆದಾ
ಕವಿತೆಯ ಚಿಗುರು ಬಲು ಅಂದ.
ಕವಿಗಳ ಅನುಭವಸಾರವು ಬೆರೆತಿಹ           
ಮಧುರಸವದು  ಕಾವ್ಯಾನಂದ.

ಕನ್ನಡ ತಾಯಿಯ ಮಮತೆಯ ಮಡಿಲಲಿ
ಸಮತೆಯೆರೆಯುತಿದೆ ಪದವೃಂದ.
ಅಕ್ಷರಜಾತ್ರೆಯ ರಥವನು ಎಳೆದಿದೆ
ಕನ್ನಡ ಕವಿಭಾವನಿಬಂಧ.

2 ಕಾಮೆಂಟ್‌ಗಳು:

  1. "ಮನುಷ್ಯ ಸುಖವಾಗಿರುವುದು ಕನಸುಗಳು ಮತ್ತು ನೆನಪುಗಳಲ್ಲಿ ಮಾತ್ರ. ಅವನ ಕಣ್ಣುಗಳಲ್ಲಿನ ಕನಸುಗಳು ಯಾವಾಗ ಬತ್ತಿಹೋಗುತ್ತವೋ ಅಂದಿಗೆ ಅವನ ಸುಖವೂ ಬತ್ತಿ ಹೋದಂತೇ ಲೆಕ್ಕ" ಎಂಬ ಹಿರಿಯರೊಬ್ಬರ ಮಾತುಗಳನ್ನು ನೆನಪಿಗೆ ತಂದ ಕವಿತೆ ಇದು. ಮನುಷ್ಯ ಎಷ್ಟೇ ಸಿರಿವಂತನಾದರೂ, ಕನಸುಗಳು ಮತ್ತು ಭಾವಗಳೇ ಇಲ್ಲದಿದ್ದರೆ ಕಡುಬಡವನಿಗೂ ಬಡವನಾಗುತ್ತಾನೆ. ಕವಿತೆಯಲ್ಲಿನ ಲಯ ಮತ್ತು ನಿನಾದಗಳು ಮನಸ್ಸಿಗೆ ಮುದ ಕೊಡುತ್ತವೆ.

    - ಪ್ರಸಾದ್.ಡಿ.ವಿ.

    ಪ್ರತ್ಯುತ್ತರಅಳಿಸಿ
  2. ಪ್ರತಿಸ್ಪಂದಿಸಿದ ಪ್ರಸಾದ್.ಡಿ.ವಿ. ಯವರಿಗೆ ತುಂಬು ಹೃದಯದ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ