ಬುಧವಾರ, ಏಪ್ರಿಲ್ 30, 2014

ಭಜ ಗುರುಚರಣಂ

ಭಜ ಗುರುಚರಣಂ ಭಜ ಗುರುಚರಣಂ
ಭಜ ಹೇ ಶಿವÀಪದಸಂಚರಣಂ
ಸರ್ವಭಯಂಕರಪಾಪವಿದೂರಂ
ಶಂಕರಗುರುವರಯತಿಚರಣಂ

ಚಿತ್ತಾಕರ್ಷಕವಸ್ತುವಿಚಾರಂ
ನಿತ್ಯಂ ತ್ಯಜ ಹೇ ಅತಿಸಂಚಾರಂ
ಕೃತ್ವಾ ಸಜ್ಜನಸಂಗಂ ಭಜ ಮನ
ಶ್ರೀಶಂಕರಗುರುವರಯತಿಚರಣಂ

ರೋಗಾವಿಷ್ಟಿತತನುಸಂಮೋಹಂ
ಭೋಗರತೇಂದ್ರಿಯಪಂಚಸಮೂಹಂ
ತ್ಯಜ ಭವಬಂಧನಕಾರಣಮೋಹಂ
ಭಜ ಶಂಕರಗುರುವರಯತಿಚರಣಂ

ಅದ್ವೈತಾಮೃತವರ್ಷಿತವಕ್ತ್ರಂ
ಸದ್ವಿದ್ಯಾಸಂಪೋಷಣರಕ್ತಂ
ಸದ್ಬುದ್ಧ್ಯಾ ಸಹ ಚಿಂತಯ ಸರ್ವಂ
ಭಜ ಶಂಕರಗುರುವರಯತಿಚರಣಂ

ಡಿ.ನಂಜುಂಡ

30/04/2014

ಸೋಮವಾರ, ಏಪ್ರಿಲ್ 28, 2014

ಸೊಲ್ಲುಸೊಲ್ಲಿನ ತಿಳಿವು ಜೊಳ್ಳಿನಂತೆಲ್ಲ!

ದೇವನಿರುವುದು ಸುಳ್ಳು, ಇಲ್ಲವೆಂದರೂ ಸುಳ್ಳು
ಭವದಿ ಭ್ರಮಿಸುವ ಮನದ ಏರಿಳಿತವೆಲ್ಲ
ಭಾವತೀವ್ರತೆಯಲ್ಲಿ ಅನುಭಾವವಡಗಿಲ್ಲ
ಅವಸಾನದಂಚಿನಾ ಅಲೆಗಳಂತೆಲ್ಲ

ಅಲೆಗಳೆರಡರ ಮೂಲ ಜಲಧಿಯಾಳದೊಳಿರಲು
ತಳಕಿಳಿಯದೇ ತಿಳಿದ ತಿಳಿವು ತಿಳಿವಲ್ಲ
ಅಳತೆಗೋಲಲಿ ಅಳೆದು ಆಳವನು ಹೇಳುತಿಹ
ಸೊಲ್ಲುಸೊಲ್ಲಿನ ತಿಳಿವು ಜೊಳ್ಳಿನಂತೆಲ್ಲ

ತಳದೊಳಿಳಿಯದ ಅರಿವೇ ಅಲೆಯ ರೂಪದ ಮನವು
ಸುಳ್ಳಿನಲ್ಲೊಡೆಯುತಿಹ ಗುಳ್ಳೆಯಂತೆಲ್ಲ
ಮೂಲಮನೆಯಲಿ ಕುಳಿತು ಮನದ ಉಬ್ಬರವಿಳಿಸಿ
ಎಲ್ಲವರಿತಿಹ ಮೌನಕೇರಿಳಿತವಿಲ್ಲ 

ಧೂಳುಧೂಳಲಿ ನಲಿವ ಒಲವಿನೊಳು ಒಂದಾಗಿ
ತಿಳಿವಿನಾಳವ ತುಳಿಯೆ ಇದ್ದರೂ ಇಲ್ಲ.
ಇಲ್ಲಗಳ ಇರುವಿಕೆಯ ಇಲ್ಲವಾಗಿಸಿ ಮನವು
ತೇಲುತಲಿ ತೆಳುವಾಗೆ ಇದ್ದಂತೆ ಎಲ್ಲ.

ಡಿ.ನಂಜುಂಡ
28/04/2014




ಭಾನುವಾರ, ಏಪ್ರಿಲ್ 27, 2014

ನುಡಿಯೊಡತಿ! ಬಾ

ನುಡಿಯೊಡತಿ! ನೀಡೆನಗೆ
ಆಡುಮಾತಿನ ಬೆಡಗ
ನಡೆಸೆನ್ನ ಕೊಠಡಿಯಿಂದಾಚೆಗೂ ಬೇಗ
ಗುಡಿಯಿಂದ ಹೊರಬಂದು
ಓಡಾಡಿ ಬೀದಿಯಲಿ
ನುಡಿಸೆನ್ನ ಜಿಹ್ವೆಯಲಿ ಹೊಸತೊಂದು ರಾಗ

ಅಡಿಗಡಿಗೆ ದಯಮಾಡು
ನುಡಿಗಟ್ಟನಿಡುವಾಗ
ಎಡವದೇ ನಡೆವಂತೆ ತೋರೆನಗೆ ಜಾಗ
ಪಡೆನುಡಿಗೆ ಗಡಿಬಿಡಿಯ
ಸಡಗರದ ಸೊಬಗಿರಿಸಿ
ಬೆಡಗಿನೊಡವೆಯ ತೊಡಿಸಿ ನೋಡುವೆನು ಆಗ
  
ಬಡವನೊಡಲಿನ ಕಿಡಿಗೆ
ಗುಡಿಯ ಕತ್ತಲೆಯಳಿದು
ದಡಬಡನೆ ಓಡುತಿರೆ ಬಾ ಮಾತಿನೊಡತಿ!
ತಡಿಕೆಗೋಡೆಯೊಳಿಣುಕಿ
ಸೊಡರಿನೊಳು ಪ್ರಜ್ವಲಿಸಿ
ಬಾಡುತಿಹ ಮೊಗವೇರಿ ಬಾರೆ ಕನ್ನಡತಿ!

ಬೇಡದಾ ನುಡಿಗಳನು
ಕಾಡಿನೊಳಗಟ್ಟಿಬಿಡು
ಹಾಡಾಗಿ ಹದಗೊಂಡು ಹಿಂತಿರುಗಲೆದೆಗೆ 
ನಾಡ ಕನ್ನಡಿಗರಾ
ಜಡತನವ ಕಳೆವಂತೆ
ಆಡಿ ಕುಣಿಯುತಲಿರಲಿ ಡಮರುಗುದ ದನಿಗೆ

ಡಿ.ನಂಜುಂಡ
27/04/2014



ಶನಿವಾರ, ಏಪ್ರಿಲ್ 26, 2014

ಮನವೆ! ನೀ ಭ್ರಮಿಸದಿರು

ತನ್ನ ಕಾಲಿನ ಮೇಲೆ ನಿಲ್ಲಲಾರದ ಕಾಲ
ಓಡೋಡಿ ಮರೆಯಾಗಿ ಹೋಗುವುದು ಸುಳ್ಳು
ಮನವೆ! ನೀ ಬೆಂಬತ್ತಿ ಹೆಜ್ಜೆ ಗುರುತನು ಹುಡುಕೆ
ಇಲ್ಲದಿರುವುದು ಹೇಗೆ ಸಿಕ್ಕೀತು ಹೇಳು

ಭೂತಕ್ಕೆ ನೆಲೆಯಿಲ್ಲ ಭವ್ಯವೆಲ್ಲವು ಊಹೆ
ಇರುವುದೀ ಕ್ಷಣವೊಂದೆ-ಅನುಭವಿಸು ಮೊಗೆದು
ನಿನ್ನೆಯಾ ನೆನಪಿನಲಿ ನಾಳೆಯಾ ಚಿಂತೆಯಲಿ
ಮರೆಯದಿರು ಹೊತ್ತ ಇನ್ನೆಂದು ಸಿಗದು

ಬುವಿಯ ಗುರುತರ ಕಾಂತವೆಲ್ಲವನು ಸೆಳೆದಂತೆ
ನಿನ್ನೂಹೆಗಳ ಸೆಳೆದು ಎಳೆದಾಡುತಿಹುದು
ಒಳಗಿನಿಂದಲಿ ಜಿಗಿದು ಹಾರುವಾ ಯತ್ನದಲಿ
ಇಲ್ಲದ್ದು ಇದ್ದಂತೆ ನಿನಗನಿಸುತಿಹುದು

ನಿನ್ನೆ-ನಾಳೆಗಳೆಲ್ಲ ಇರುವುದೀ ಕ್ಷಣದಲ್ಲಿ
ಬಿಟ್ಟರದು ಸಿಗದೆಂದೂ ಜನುಮದಲ್ಲಿ
ಬಂದ ಊಹೆಯು ನಿಂತು ಕೆಳಜಾರುವಾ ಮುನ್ನ
"ಇಂದು" ಇರುವುದು ನೋಡು ಬಿಂದುವಲ್ಲಿ

ಕ್ಷಣದ ಹೊತ್ತೊಂದು ಬಿಂದುಮಾತ್ರದಿ ಕಂಡು
ಅಲ್ಲಿ ವಿಸ್ತರಿಸೆ ಅದು ನಿರಪೇಕ್ಷದಂತೆ
ಆದ್ಯಂತರಹಿತದಲಿ ಏಕರಸವಾಗಿರದೆ
ನೀ ತಿಳಿದುದೆಲ್ಲವೂ ಸಾಪೇಕ್ಷದಂತೆ

ಮನವೆ! ನೀ ಭ್ರಮಿಸದಿರು, ನಿನ್ನೊಳಗೆ ನೆಲೆಯಾಗು
ಅನವರತವನುಭವಿಸು ಶಾಂತತೆಯ ಸೊಬಗ
ಈ ಕ್ಷಣದ ಅರಿವೊಂದು ಹರಿವಾಗಿ ವಿಸ್ತರಿಸಿ
ಜಗದಗಲ ಹರಡುತಿರೆ- ನೋಡಲ್ಲಿ ಬೆರಗ

ಡಿ.ನಂಜುಂಡ
27/04/2014



ಬುಧವಾರ, ಏಪ್ರಿಲ್ 23, 2014

ಸೋಕು ತೊಳೆ ಬಾ!

ಸಣ್ಣನೇಕೋ ಕಿರುಚಲಿಲ್ಲ
ಮೈಯ ಪರಚಿಕೊಳಲೇ ಇಲ್ಲ
ಚೊಣ್ಣವನ್ನು ಹಾಕಲಿಲ್ಲ
ಸೋಕು ತೊಳೆಯೇ ನೀ
ಗಾಳಿ ಸೋಕು ತೊಳೆಯೇ

ಊಟವನ್ನು ಮಾಡಲಿಲ್ಲ
ಆಟವಾಡಿ ನಲಿಯಲಿಲ್ಲ
ಏಟನಂತೂ ತಿನ್ನಲಿಲ್ಲ
ಸೋಕು ತೊಳೆಯೇ ನೀ
ಗಾಳಿ ಸೋಕು ತೊಳೆಯೇ

ಬಾಳೆ ಎಲೆಯನೊಂದ ತಂದು
ಕೂಳ ರಾಶಿಯನ್ನು ಸುರಿದು
ಕೊಳ್ಳಿಯೊಂದ ಹೊಚ್ಚಿ ಮೇಲೆ
ಸೋಕು ತೊಳೆಯೇ ನೀ
ಗಾಳಿ ಸೋಕು ತೊಳೆಯೇ

ಸುಣ್ಣವನ್ನು ತಂದು ಇರಿಸಿ
ಕೆಂಪು ಬಣ್ಣವನ್ನು ಮಾಡಿ
ಸಣ್ಣನನ್ನು ಕರೆದು ಬೇಗ
ಸೋಕು ತೊಳೆಯೇ ನೀ
ಗಾಳಿ ಸೋಕು ತೊಳೆಯೇ

ಡಿ.ನಂಜುಂಡ
23/04/2014



ಶನಿವಾರ, ಏಪ್ರಿಲ್ 19, 2014

ತಾಳ್ಮೆಯೊಡಲು

ನೊಂದು ಸುರಿಸಿದ ಹೆಣ್ಣ ಕಣ್ಣೀರ ಧಾರೆಯದು
ಇಳೆಯಲ್ಲಿ ತಾ ಇಂಗಿ ಹರಿವಾಗಿದೆ
ತಾಳ್ಮೆಯಲಿ ಭೂಮಾತೆಯೊಡಲಿನಲಿ ಸೋಸಿರಲು
ಕೊಳಗಳಲಿ ಸಿಹಿನೀರ ಸೆಲೆಯುಕ್ಕಿದೆ

ಸ್ತ್ರೀಕುಲದ ಕಣ್ಣೀರ ಧಾರೆಯದು ನೆಲಕಿಳಿದು
ಜಾನಕಿಯ ರೂಪದಲಿ ಬುವಿಯಿಂದ ಭವಿಸೆ
ರಾಣಿಯಾಗಿಯೂ ತಾನು ಮುಳ್ಳು ಹಾದಿಯ ಸವೆಸಿ
ಅಪಹರಣಕೊಳಗಾಗಿ ಕಂಬನಿಯ ಸುರಿಸೆ

ಅವರಿವರ ಮಾತುಗಳ ಅರಸ ತಾ ಕೇಳುತಲಿ
ತನ್ನರಸಿಯನು ಮತ್ತೆ ವನವಾಸಗೊಳಿಸೆ
ಅನುಮಾನದಲಿ ಪತಿಯೇ ಅವಮಾನಗೊಳಿಸುತಿರೆ
ಅವನಿಮಾತೆಯು ತಾನೇ ಮಗಳ ಸ್ವೀಕರಿಸೆ

ಮನಸಿನಿಂದಲೆ ಸತಿಯ ದೂರಗೊಳಿಸುತಲಿರಲು
ಅಡಿಗಡಿಗೆ ಬೇಯುತಲಿ ಅಳುಸುರಿಸುತಿರಲು
ಕಂಬನಿಯ ಕೋಡಿಗಳು ಮಣ್ಣನ್ನು ತೋಯಿಸುತ
ಬುವಿಯಾಳಕಿಳಿದುಕ್ಕಿ ಕಡಲಿನೊಳು ಬರಲು.

ಡಿ.ನಂಜುಂಡ
19/04/2014


ಗುರುವಾರ, ಏಪ್ರಿಲ್ 17, 2014

ಹರಿ! ನಿನ್ನ ಚರಣದೊಳು

ಹರಿ! ನಿನ್ನ ಚರಣದೊಳು ಮನದ ಹರಿವಿರುವಂತೆ
ವರವಿತ್ತು ಹರಸೆನ್ನ ಹೃದಯದೇವ!
ಕರಣಗಳ ಹುರಿಗೊಳಿಸಿ ಭಾವಶರವನು ಸಿಗಿಸಿ 
ಗುರಿಯ ಕರುಣಿಸು ಎನಗೆ ಪರಮದೇವ!

ಏಳು ಬೀಳುಗಳೆಲ್ಲ ಸಹಜಸೃಷ್ಟಿಯ ಹಾಗೆ
ಬಾಳಿಗಂದವನಿತ್ತು ನಗುವಿನಲಿ ಬರಲಿ
ಸಾಲು ಸಾಲಲಿ ನಿಂದ ನಿನ್ನೆಯನುನುಭವವೆಲ್ಲ
ಕಾಲಕಾಲಕೆ ಬಲಿತು ಫಲವಾಗುತಿರಲಿ

ಸಫಲವಿಫಲಗಳೆಲ್ಲ ಮೂಜಗದಿ ಪಸರಿಸಿಹ
ಅಪರಿಮಿತಪದತಲಕೆ ಹವಿಯಾಗಿ ಸಲಲಿ
ಚಪಲತೆಯ ಚಿತ್ತವನು ಹದಗೊಳಿಸಿ ಪದವೊಂದು
ಜಪದ ಕುಡಿಗಳಲೊಡೆದು ತೆನೆಯಾಗಿ ಬರಲಿ

ನಿನ್ನಡಿಯ ಹುಡಿಯೆಲ್ಲ ಜಗದಗಲ ಹರಡಿರಲು
ನನ್ನ ಮನವದರಲ್ಲಿ ಒಂದಾಗಿ ನಿಲಲಿ
ಸೊನ್ನೆಯೊಳು ಸೊನ್ನೆ ತಾ ಕಳೆದುಳಿದ ಸೊನ್ನೆಯಲಿ
'ನಾನು' ಎಂಬರಿವೆಲ್ಲ ಸೊನ್ನೆಯಂತಿರಲಿ.

ಡಿ.ನಂಜುಂಡ

18/04/2014