ಶನಿವಾರ, ಏಪ್ರಿಲ್ 27, 2013

ಕನವರಿಸಿದ ಮನದ ದನಿ



ಕಾನನದ ಕೋಗಿಲೆಯೆ
ಕೊರಳಿನಲಿ ಇಂಪೆರೆದು
ತನುಮನದಿ ಕಂಪನವ ತಂದಿರಿಸಿದೆ.
ಚಣಚಣದ ಕಂಪನದಿ
ಇಂಚರದ ನುಡಿಯೊಂದು
ನನ್ನೆದೆಯ ಅಂಗಳದಿ ಪದವಿರಿಸಿದೆ.

ಬನದನಿಯ ಇಂಚರಕೆ
ನನ್ನೆದೆಯು ಅನುರಣಿಸಿ      
ಕಣಕಣದಿ ಕವನವನು ಅಣಿಗೊಳಿಸಿದೆ.
ಅನುದಿನವು ಕನವರಿಸಿ
ಇನಿದನಿಗೆ ಹಾತೊರಿಸಿ
ಮನತಣಿಪ ನುಡಿಯೊಂದನನುಗೊಳಿಸಿದೆ.

ಹನಿಹನಿಯು ಹೊನಲಾಗಿ
ಅನುದಿನವು ಹರಿವಂತೆ
ಕನವರಿಪ ಮನವೆಲ್ಲ ದನಿಯಾಗಿದೆ.
ಇನಿದನಿಗೆ ಮನತಣಿದು
ಎನ್ನೆದೆಯು ತಂಪಾಗಿ
ಕಣ್ಣುಗಳ ಅಂಚಿನಲಿ ಹನಿಜಾರಿದೆ.




ಶುಕ್ರವಾರ, ಏಪ್ರಿಲ್ 26, 2013

ಅವಸರಿಸದಿರು ಮನವೆ!



ಓಡುತಿಹೆ ವೇಗದಲಿ ಗೊತ್ತುಗುರಿಯಿಲ್ಲದೆಯೆ
ಏನನ್ನು ತರಬೇಕು?- ಕೇಳು ಮನವೆ.
ನಿನ್ನ ವೇಗದ ಗತಿಗೆ ಮಿತಿಹಾಕಿ ಬಾ ಬಳಿಗೆ
ಇರಬಹುದು ನನ್ನೊಳಗೆ ತರುವ ವಸ್ತು.

ಇಂಧನವ ಹಾಕಿದೊಡೆ ಓಡಬಾರದು ಹಾಗೆ
ಗುರಿಯನ್ನು ಅರಿಯುತ್ತ ನಡೆಯಬೇಕು.
“ಕುಟ್ಟಿ ಕುಂದಾಪುರಕೆ ಹೋದಂತೆ ಹೋಗದಿರು”
“ಏನನ್ನು ತರಬೇಕು?”- ತಿಳಿದು ಹೋಗು.

ನಾನು ಹೇಳುವ ವಸ್ತು ತರಬೇಡ ಅವಸರದಿ
“ನಿನಗೇಕೆ ಅದುಬೇಕು?”  ಕೇಳು ಒಮ್ಮೆ.
ಕುಳಿತೊಮ್ಮೆ ಮಾತಾಡಿ ಹೋಗಿ ಬಾ ನಡೆಯುತ್ತ
ನೋಡುವೆನು ಎಲೆ ಮನವೆ! ನಿನ್ನ ನಡೆಯ.

ದುಡ್ಡು ದುಡ್ಡು!



ದುಡ್ಡಿನಾ ಬೆಂಬತ್ತಿ ಗುಡ್ಡೆಮಾಡುವ ಮಂದಿ
ಹೆತ್ತ ಕರುಳನು ಬಿಡದೆ ಚುಚ್ಚುತಿಹರು.
ಚುಚ್ಚಿದಾ ರಭಸಕ್ಕೆ ಹೊರಬಂದ ದುಡ್ಡಿನಲಿ
ಹುಟ್ಟುಹಬ್ಬಕೆ ಹಣತೆ ಹಚ್ಚುತಿಹರು.

ಹೆತ್ತವರ ಕತ್ತಿನಲಿ ಹರಳೊಂದು ಹೊಳೆದಿರಲು
ಸತ್ತಾಗ ಬೆಂಬತ್ತಿ ಸೆಳೆಯುತಿಹರು.
ಸತ್ತ ದೇಹದ ಆತ್ಮ ಕಾಡದಿರಲೆಮಗೆಂದು
ಶ್ರದ್ಧೆಯಲಿ ತಿಥಿಯೂಟ ಸವಿಯುತಿಹರು.

ಗುಡ್ಡೆ ಹಾಕಿದ ದುಡ್ಡು ಬಾರಲಾರದು ಹಿಂದೆ
ಕೃತಕರ್ಮಫಲವೆಲ್ಲ ಬರದೆ ಬಿಡದು.
ಮೈಯ ಬೆವರಲಿ ದುಡಿದ ದುಡ್ಡೆಮ್ಮ ಕಾಯುವುದು
ಹೆತ್ತ ಕರುಳಿನ ನೆರಳು ನಮಗೆ ಇರಲು

ಗುರುವಾರ, ಏಪ್ರಿಲ್ 25, 2013

ಮನೋರಥ-ಧ್ಯಾನಪಥ



ನಿಂತ ಪಥದಲಿ ನಿಂತು ಚಲಿಪ ರಥವನು ನೋಡೆ
ವೇಗ ತಿಳಿವುದು ನಮಗೆ ಅಂದವೆಲ್ಲ.
ಪಥವೆ ಚಲಿಸಲು ಅಲ್ಲಿ ನಾವು ನಿಲ್ಲುವುದೆಲ್ಲಿ
ನಮ್ಮ ಮನಸಿನ ರಥಕೆ ಗಮ್ಯವೆಲ್ಲ.

ಮನಸೆಂಬ ರಥವೊಂದು ಓಡುತಿರೆ ವೇಗದಲಿ
ನಿಂತು ನೋಡಲು ಅಲ್ಲಿ ವೇಗ ಇಲ್ಲ.
ನೋಡುಗನ ನೋಟವದು ದಿಟ್ಟವಾಗಿರಲಲ್ಲಿ
ಪಥವೊಂದೆ ಉಳಿದಿಹುದು ರಥವೆ ಇಲ್ಲ.

ಪಥವನ್ನೆ ದಿಟ್ಟಿಸುತ ಸ್ಥಿರವಾಗಿ ಇರಲಲ್ಲಿ
ಇರವೊಂದೆ ಉಳಿಯುವುದು ಪಥವು ಇಲ್ಲ.
ನಮ್ಮ ಇರವಿನ ಅರಿವು ಹರಿವಾಗಿ ಸ್ಥಿರವಾಗೆ
ಬಯಲೊಂದೆ ಇದೆಯಲ್ಲಿ -ಲೀನವೆಲ್ಲ.




ಬುಧವಾರ, ಏಪ್ರಿಲ್ 24, 2013

ಸ್ಥಿರಚಲನೆಗಳೆರಡು ಶಿವಗಿರಿಜೆಯರಂತೆ



ಮನಸು ಚಲಿಸಲು ಗಿರಿಜೆ
ಮನಸು ನಿಲ್ಲಲು ಶಿವವು
ಶಿವಗಿರಿಜೆಯೆರಡೊಂದೆ ಬೇಧವಿಲ್ಲ.
ಮೌನಶಿವ ನೋಡುವನು
ಮನದ ಪರದೆಯ ಮೇಲೆ
ತನ್ನಾತ್ಮಗಿರಿಜೆಯನು- ನಾಟ್ಯ ಎಲ್ಲ.

ಚಲನೆಯದು ವಿಸ್ತರಿಸಿ 
ಸೃಷ್ಟಿಯಾಗಿದೆ ಜಗದಿ
ಚಲನರಹಿತನ ಮನದ ಪರದೆಯಲ್ಲಿ.
ತನ್ನ ಚಲನೆಯ ತಾನೆ
ಮನದ ಅಲೆಯಲಿ ಕಂಡು
ಶಿವನು ಕುಳಿತಿಹ ಮೌನಶರಧಿಯಲ್ಲಿ

ಚಲನೆಯಾಡಿದ ನಾಟ್ಯ
ಗಿರಿಜೆಯೆಂಬುದೆ ದಿಟವು
ಮನದ ಸೃಷ್ಟಿಯ ಬಣ್ಣ ವೈವಿಧ್ಯವು.
ಚಲನರಹಿತವೆ ಮೌನ
ಶಿವನೆಂಬ ಸ್ಥಿರತತ್ತ್ವ
ನಿಂತು ನೋಡಲು ಅಲ್ಲೆ- ಸಾನ್ನಿಧ್ಯವು.