ಶನಿವಾರ, ಏಪ್ರಿಲ್ 6, 2013

ಭ್ರಷ್ಟತನ!ಭ್ರಷ್ಟತನದಲಿ ಮುಳುಗಿ ಅಧಿಕಾರಿ ತಾ ಮೆರೆದು
ಎದೆಯುಬ್ಬಿ ನಡೆಯುವನು ಜನರಮುಂದೆ.
ಕೆಸರಿನಲಿ ಮಿಂದೆದ್ದು ತಲೆಯೆತ್ತಿ ನಿಂತಂತೆ
ಹೆದ್ದಾರಿ ಮಧ್ಯದಲಿ ಕೋಣಮಂದೆ.

ಕೆಸರಿನಲಿ ಮುಳುಗೆದ್ದ ಕೋಣನಾ ಸೊಕ್ಕನ್ನು
ಮುರಿಯದಿರುವನೆ ಯಮನು ಲೋಕದಲ್ಲಿ?
ಜೀವನದ ಗಣಿತವದು ತ್ರಿಕೋಣಮಿತಿಯಂತೆ
ಮೂಲೆಮೂಲೆಯ ಲೆಕ್ಕ ಇರುವುದಿಲ್ಲಿ.

ಸುಪ್ತಸ್ಮೃತಿಯಲಿ ಉಳಿವ ಕರ್ಮಚಿತ್ರದ ಬರಹ
ಚಿತ್ರಗುಪ್ತನ ನೆರಳ ಗುಪ್ತ ದಾರಿ.
ಪಾಪಪುಣ್ಯದ ಲೆಕ್ಕ ಗಣಿಸುತಲಿ ಕುಳಿತಿಹನು
ಯಮನೊಬ್ಬ ಹೃದಯದಲಿ ಕೋಣವೇರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ