ಶುಕ್ರವಾರ, ಏಪ್ರಿಲ್ 19, 2013

ಎರಡಿಲ್ಲದಿರಲೊಂದೆ- ಸತ್ಯ ಒಂದೆ.ನಿನ್ನ ಚಲುವಿನ ಬಿಂಬ
ನನ್ನ ಕಣ್ಣಲಿ ನಿಂದು
ಜಗವನ್ನು ಲಯಗೊಳಿಸಿ ಚಿತ್ರವಾಗಿ.
ಜಗದ ಅರಿವದು ಮಿಥ್ಯ
ಬ್ರಹ್ಮದರಿವೇ ಸತ್ಯ
ಎಂಬಂತೆ ನೀ ನಿಂತು ನಿತ್ಯವಾದೆ.

ಚಿತ್ರದೊಳಗಿನ ಜೀವ
ಬ್ರಹ್ಮನೊಳಗಿನ ಭಾವ
ಒಂದಂತೆ ನಾ ಕಂಡು ಕರಗಿ ಹೋದೆ.
ಭಾವಬಿಂಬದ ನೆರಳು
ಇಲ್ಲವಾಗಲು ಅಲ್ಲಿ
ಜೀವಚಿತ್ರದಲಿ ನಾ ಲೀನವಾದೆ.

ನಾನಿಲ್ಲದಿರಲಲ್ಲಿ
ನೀನೆಲ್ಲ ನಾನಾಗಿ
ನನ್ನೊಳಗ ಭಾವದಲಿ ಜೀವವಾದೆ.
ನಿನ್ನ ಭಾವದ ಲಹರಿ
ನನ್ನೆದೆಯೊಳಗೆ ಹರಿದು
ವೀಣೆ ನುಡಿಸುತ ಅಲ್ಲಿ ಗೀತೆಯಾದೆ.

ಗೀತೆಯೊಳಗಿನ ವಾಣಿ
ವೀಣೆಯೊಳಗಿನ ಗೀತೆ
ಭಾವದೊಡಲಿನ ರಾಗ ಎಲ್ಲ ಒಂದೆ.
ಚಲನವಿಲ್ಲದ ಸ್ಥಿರವೆ
ಚರಣವಾಗಲು ಚಲನೆ
ಎರಡಿಲ್ಲದಿರಲೊಂದೆ ಸತ್ಯ ಒಂದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ