ಬಣ್ಣ
ಬಣ್ಣದ ಭಾವದುಡುಗೆಯನು ಕಳಚೆಸೆದು
ಜಿನನಾದ
ವೀರನವ ಮಹಾವೀರ.
ವೈರಾಗ್ಯಕಷಾಯವ
ಕುಡಿಯುತಲಿ ಧರಿಸಿದನು
ದಿಕ್ಕೆಂಬ
ಅಂಬರವ ಸಂತ ಧೀರ.
ತನ್ನೊಳಗೆ
ಅವಿತಿರುವ ಅರಿಗಳನು ಸದೆಬಡಿದು
ವಿರಾಗಿಯಾಗುವವನೆ
ನಿಜದಿ ವೀರ.
ರಾಗ ಕಳೆಯಲು
ಅಲ್ಲಿ ಬಣ್ಣಗಳು ತಿಳಿಗೊಂಡು
ಉಳಿಯುವುದು
ಒಳಗೊಂದೆ ಶಾಂತರಾಗ.
ಶಾಂತತೆಯ
ಅರಿವಿನಲಿ ಜಿನತತ್ತ್ವವುದಯಿಸಲು
ಹಿಂಸಿಸುವ
ವೈರಿಗಳು ಇಲ್ಲವಲ್ಲಿ.
ಕಾಮಾದಿ
ವೈರಿಗಳೆ ನಮ್ಮನ್ನೆ ಹಿಂಸಿಸಲು
ಉದಯಿಸಲಿ
ನಮ್ಮೊಳಗೆ ಜೈನತತ್ತ್ವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ