ಅಧಿಕಾರ ಭ್ರಷ್ಟತೆಗೆ
ಅಂಕುಶವು ಏಕಿಲ್ಲ?
ಆತಂಕ ಕಾಡುತಿರೆ
ರಾಜ್ಯದಲ್ಲಿ.
ಅವನಿಕಾಯುವ ದೇವ
ಸುಮ್ಮನಾಗಿಹನೇಕೆ?
ಪಾಪಪುಣ್ಯದ ಲೆಕ್ಕ
ಪತ್ರವೆಲ್ಲಿ?
ಗಣರಾಜ್ಯವಿದೆಯಲ್ಲಿ ಜನಸೂತ್ರ
ಸಾಕೆಂದು
ತಾ ಸೂತ್ರ ಹರಿಬಿಟ್ಟು
ನೋಡುತಿಹನೆ?
ಭ್ರಷ್ಟತೆಯ ಪಟವಿಲ್ಲಿ
ಹಾರುತಿರೆ ಗಗನದಲಿ
ಆ ದೇವ ಗಾಳಿಪಟ ಆಡುತಿಹನೆ?
ಪಟ್ಟವೇರಿದ ರಾಜ ಅಟ್ಟಹಾಸದಿ
ಮೆರೆಯೆ
ಹೋಯಿತೆಲ್ಲಿಗೆ ನಮ್ಮ
ರಾಜ್ಯಸೂತ್ರ?
ಕಲಿಗಾಲವಿದೆಯಲ್ಲಿ ಕಲಿನಿಯಮ
ಸಾಕೆಂದು
ಹರಿದುಬಿಟ್ಟಿದೆಯೇನು
ಜಗದಸೂತ್ರ?
ಚಟ್ಟವೇರಿದ ರಾಜ
ಹೊತ್ತೊಯ್ಯುವನೆ ಗಂಟ?
ಮತ್ತೇಕೆ ಭ್ರಷ್ಟತನ
ಬಿಡಬಾರದೆ?
ಸುಡುಗಾಡ ಕಟ್ಟಿಗೆಯು
ಸುಟ್ಟೀತೆ ಕೃತಕರ್ಮ!?
ಪ್ರಾರಬ್ಧ ಫಲವಾಗಿ
ಸುಡಲಾರದೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ