ಬಕ್ಕತಲೆಯ
ಅರಸನೊಬ್ಬ
ಚಿಕ್ಕರಾಜ್ಯವಾಳುತಿರಲು
ಹೊಕ್ಕಿತೊಂದು
ತಲೆಯ ಒಳಗೆ ಸುಡುವ ಚಿಂತೆಯು
ಅಕ್ಕಪಕ್ಕದಲ್ಲಿ
ಇರಲು
ಲೆಕ್ಕಮಾಡಲಾಗದಷ್ಟು
ಸೊಕ್ಕಿ
ಬೆಳೆದ ಕೂದಲಿರುವ ತಲೆಯ ಅರಸರು.
ಕೂದಲಿರದ
ತಲೆಯ ನೋಡಿ
ಮೂದಲಿಸುವ
ಮಂದಿ ಎಲ್ಲ
ಮದ್ದು
ಮಾಡಿ ಬನ್ನಿ ಎಂದು ಸದ್ದು ಸಾರಿದ.
ಸಾಧ್ಯವಿರದ
ಕಾರ್ಯ ಎಂದು
ವೈದ್ಯಮಂದಿ
ಸೋತರೆಲ್ಲ
ಸಾಧುವೊಬ್ಬ
ಎದ್ದು ನಿಂತು ಮದ್ದು ತಿಳಿಸಿದ.
ಮಲಗುವಾಗ
ತೈಲವನ್ನು
ತಲೆಯ
ತುಂಬ ಸವರಬೇಕು
ಇಲಿಯ
ನೆನಪು ಬಂದರಾಗ ಹಚ್ಚಕೂಡದು.
ಇಲಿಯ
ನೆನಪು ಆದರಾಗ
ಉಳಿದ
ಕೂದಲೆಲ್ಲ ಉದುರಿ
ತಲೆಯು
ತಾಮ್ರಕಲಶದಂತೆ ನಿತ್ಯ ಹೊಳೆವುದು.
ತಲೆಯ
ತುಂಬ ಕೂದಲೆಲ್ಲ
ಬೆಳೆದ
ಪರಿಯ ಕನಸ ಕಂಡು
ಮಲಗುವಾಗ
ರಾಜನವನು ತೈಲ ಪಿಡಿದನು.
ಇಲಿಯ
ನೆನಪು ಮಾಡನೆಂದು
ತಲೆಗೆ
ತೈಲ ಸವರುವಾಗ
ಇಲಿಯ
ನೆನಪು ಮತ್ತೆ ಮತ್ತೆ ಬಿಡದೆ ಕಾಡಿತು.
ತಲೆಯು
ಬಕ್ಕವಿದ್ದರದುವೆ
ಇಳೆಯ
ರಾಜಯೋಗವೆಂದು
ತಿಳಿದು
ಮನದಿ ತೈಲವನ್ನು ದೂರ ಬಿಸುಟನು.
ತಲೆಯ
ಮೇಲೆ ಕೂದಲೇಕೆ
ಒಳಗೆ
ಬುದ್ಧಿ ಇರಲು ಸಾಕು
ಚೆಲುವು
ನಮಗೆ ಬಕ್ಕ ತಲೆಯೆ ಎಂದು ಅರಿತನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ