ಜಠರದ
ಅಗ್ನಿಗೆ ಆಹುತಿ ನೀಡಲು
ಬೇಕಿದೆ
ಬಿಸಿಬಿಸಿ ಉಪ್ಪಿಟ್ಟು.
ಪ್ರಾತಃಕಾಲದ
ನಿತ್ಯದ ಹೋಮಕೆ
ಸುಲಭದ
ಹವಿಯೇ ಉಪ್ಪಿಟ್ಟು.
ಆ ರವಿ
ಕಿರಣವು ರವೆಯೊಳು ಹುದುಗಿದೆ
ಪೂಜಿಸಿ
ರವೆಯನು ಕಾಪಿಟ್ಟು.
ರವೆಯಾ
ಕಾಂತಿಯು ಎಲ್ಲೆಡೆ ಹರಡಲು
ಹುರಿಯಿರಿ
ಪಾತ್ರೆಗೆ ಸೌಟಿಟ್ಟು.
ತರಕಾರಿಗಳನು
ಬೆರೆಸುತ ಬೇಯಿಸೆ
ತಿನ್ನಲು
ತುಂಬಾ ರುಚಿಕಟ್ಟು.
ಉಳ್ಳಾಗೆಡ್ಡೆಯ
ಬಳಸಿದರಂತೂ
ಲಾಲಾರಸವದು
ದುಪ್ಪಟ್ಟು.
ಬಿಸಿಬಿಸಿ
ತುಪ್ಪದ ಜೊತೆಯಲಿ ಸೇವಿಸೆ
ಹೊಳೆವುದು
ಸುಂದರ ಮೈಕಟ್ಟು.
ಪೂರ್ಣಾಹುತಿಯಾ
ಸಮಯದಿ ನಮಿಸಿರಿ
ರವೆಯಾ
ಡಬ್ಬದಿ ಕಣ್ಣಿಟ್ಟು.
ನೆಂಟರು
ಬಂದರೆ ಕಸಿವಿಸಿಯಾದರೆ
ಹವನಕೆ
ತಪ್ಪದು ಉಪ್ಪಿಟ್ಟು.
ಒಂಟಿ
ಬದುಕಿನಾ ಹತಾಶ ಮನಸಿಗೂ
ತಿಳಿದಿದೆ
ರವೆಯಾ ಒಳಗುಟ್ಟು
ರವೆಯನು
ಹುರಿಯುತ ಪರಿಮಳ ಬೀರಲು
ಎಲ್ಲಿದೆ
ಮನಸಿಗೆ ಚೌಕಟ್ಟು?
ಕವಿಋಷಿ
ಸಂತರ ನುಡಿನುಡಿಯಲ್ಲೂ
ಇರುವಾ
ತ್ರಾಣವೆ ಉಪ್ಪಿಟ್ಟು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ