ಶುಕ್ರವಾರ, ಏಪ್ರಿಲ್ 19, 2013

ಸ್ವಪ್ನ-ನಿದ್ರೆ-ಎಚ್ಚರ!
ಸ್ವಪ್ನದಾ ದೃಶ್ಯಗಳು ನಿಜವೆಂದು ತೋರುವುವು
ಸ್ವಪ್ನದಂತ್ಯಕೆ ಎಲ್ಲ ಸುಳ್ಳ ಸಂತೆ
ಗಾಢನಿದ್ರೆಯ ಸುಖವು ಎಚ್ಚರದಿ ಅರಿಯುವುದು
ಎಚ್ಚರದ ಸ್ಥಿತಿಯೆಲ್ಲ ಸುಳ್ಳಿನಂತೆ.

ಪರಿಪೂರ್ಣದೆಚ್ಚರದಿ ಮನಸೆಲ್ಲ ಕರಗುವುದು
ಉಳಿಯುವುದು ಅರಿವೊಂದೆ ಸತ್ಯವದುವೆ.
ಸ್ವಪ್ನವೆಲ್ಲವು ಸ್ವಪ್ನ ನಿಜವೆಲ್ಲವೆನ್ನುವುದು
ಸ್ಪಪ್ನದಲ್ಲಿಯೆ ತಿಳಿಯೆ ನಿತ್ಯವದುವೆ.

ಗಾಢನಿದ್ರೆಯ ಅರಿವು ನಿದ್ರೆಯಲ್ಲಿಯೆ ಭವಿಸೆ
ಭವ್ಯವೆಂಬುದು ಸುಳ್ಳು ಭೂತ ಸುಳ್ಳು.
ವರ್ತಮಾನದ ಅರಿವು ನಿತ್ಯವಾಗಲು ನಮಗೆ
ಭೂತಭವಿತವ್ಯಗಳ ಅರಿವು ಸುಳ್ಳು

ಎಚ್ಚರದ ಎಚ್ಚರದಿ ಇರುವುದೆಲ್ಲವು ಸತ್ಯ
ಅರಿವೊಂದೆ ಇದೆಯಲ್ಲಿ ಬೇರೆ ಇಲ್ಲ.
ಮನಸಿನಾ ಅಲೆಯಲ್ಲಿ ಕುಣಿದಾಡುತಿರಲೆಮಗೆ
ನಿತ್ಯ ಸತ್ಯದ ಅರಿವು ಕಾಣಲಿಲ್ಲ.

ಸಾಪೇಕ್ಷಕಾಲದಾ ಅರಿವಲ್ಲಿ ನಾವಿರಲು
ವರ್ತಮಾನದ ಸತ್ಯ ತಿಳಿಯುತಿಲ್ಲ.
ನಿರಪೇಕ್ಷದರಿವೊಂದೆ ನಿತ್ಯವಾಗಿಹ ಸತ್ಯ
ಪರಮಾತ್ಮನೆನ್ನುವೆವು ಅದನು ನಾವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ